ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಸುಳ್ಯದಲ್ಲಿ ತಾಲೂಕು ಮಟ್ಟದ ಪ್ರತಿಭಟನಾ ಸಭೆ

0

ವರದಿಯನ್ನು ಕೈ ಬಿಡುವಂತೆ ಮುಖಂಡರುಗಳ ಒತ್ತಾಯ

ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರರಿಗೆ ಮನವಿ

ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ ಘೋಷಣೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಮಟ್ಟದ ಬೃಹತ್ ಪ್ರತಿಭಟನೆ ಅ 8 ರಂದು ನಡೆಯಿತು.

ಮಲೆನಾಡು ಜನಹಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ಕಿಶೋರ್ ಕುಮಾರ್ ಶಿರಾಡಿರವರ ನೇತೃತ್ವದಲ್ಲಿ ಈ ಪ್ರತಿಭಟನಾ ಸಭೆ ನಡೆದು ಕಸ್ತೂರಿ ರಂಗನ್ ವರದಿಯನ್ನು ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ (ESA) 7ನೇ ಕರಡು ಅಧಿಸೂಚನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು. ಪಶ್ಚಿಮಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿ ಗುರುತು ಅಗಬೇಕು. ಕೃಷಿ ಭೂಮಿಗು ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಾಣವಾಗಬೇಕು.


ಪಶ್ಚಿಮ ಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ,ಕೃಷಿ ಭೂಮಿ ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಸಬಾರದು.ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ರೈತರ ಪ್ಲಾಟಿಂಗ್ ಆಗದ ಭೂಮಿಯನ್ನು ಪ್ಲಾಟಿಂಗ್ ಮಾಡಿಕೊಡಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಸಭೆಯಲ್ಲಿ ಹಾಜರಿದ್ದ ಗಣ್ಯರುಗಳು ಮಾತನಾಡಿ ಆಗ್ರಹಿಸಿದರು.

ಹಿರಿಯ ಕೃಷಿಕರು ಮತ್ತು ಸಮಿತಿಯ ಸದಸ್ಯರಾದ ಪಿ ಬಿ ಪ್ರಭಾಕರ ರೈ ಮಾತನಾಡಿ ‘ಕೃಷಿಕರ ಜೀವನವನ್ನು ಹಾಳು ಮಾಡುವ ಈ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಬಾರದು ಮತ್ತು ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಬೇಕೆಂದು ಕರೆ ನೀಡಿದರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಕೃಷಿಕರಾದ ಪಿ ಸಿ ಜಯರಾಮ್ ರವರು ಮಾತನಾಡಿ ‘ಕಸ್ತೂರಿರಂಗನ್ ವರದಿಯನ್ನು ನಾವೆಲ್ಲರೂ ರಾಜಕೀಯ ಮರೆತು ವಿರೋಧಿಸಬೇಕು. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೈತರಿಗೆ ಪೂರಕವಾದ ತೀರ್ಮಾನಗಳನ್ನು ಕಸ್ತೂರಿ ರಂಗನ್ ವರದಿಯ ಬಗ್ಗೆ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟದಲ್ಲಿ ಸದಾ ನಾವು ನಿಮ್ಮೊಂದಿಗೆ ಇರಲಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಸಮಿತಿಯ ಕಾನೂನು ಸಲಹೆಗಾರರಾದ ಎಂ ವೆಂಕಪ್ಪಗೌಡ ರವರು ಮಾತನಾಡಿ ‘ಕಸ್ತೂರಿ ರಂಗನ್ ವರದಿಯ ವಿರುದ್ಧ ಕರ್ನಾಟಕ ಸರಕಾರದ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಆಗಿರುವ ಅನಾನುಕೂಲವನ್ನು ಸರಿಪಡಿಸುವ ಸಂಪೂರ್ಣ ಪ್ರಯತ್ನವನ್ನು ಈ ತನಕದ ಯಾವ ಮುಖ್ಯಮಂತ್ರಿಗಳಿಂದಲೂ ಮಾಡಲಾಗದ ಸಮಸ್ಯೆಗೆ ರಾಜ್ಯ ಸರ್ಕಾರದ ಪ್ರಸ್ತುತ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಸರ್ವ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಸ್ತೂರಿ ರಂಗನ್ ವರದಿಯಿಂದ ಭಾದಿತ ರೈತಾಪಿ ವರ್ಗದ ಹಿತ ರಕ್ಷಣೆಗೆ ಮುಂದಾಗಿದ್ದಾರೆ.
ಆದರೆ ಇದು ಕೇವಲ ರಾಜ್ಯ ಸರ್ಕಾರ ಮಾತ್ರ ಮಾಡಿದರೆ ಸಾಲದು ಇದಕ್ಕೆ ಕೇಂದ್ರ ಸರ್ಕಾರದ ಸಾಥ್ ಅವಶ್ಯಕತೆ ಇದ್ದು ಇದಕ್ಕೆ ನಮ್ಮ ಜಿಲ್ಲೆಯ ಸಂಸದರು ಮತ್ತು ಅದೇ ರೀತಿ ರಾಜ್ಯದ ಎಲ್ಲಾ ಸಂಸದರುಗಳು ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.ನಾನು ಕೂಡ ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆದಿರುವ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಇದೀಗ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾದ ಕಿಶೋರ್ ಕುಮಾರ್ ಶಿರಾಡಿ ರವರ ನೇತೃತ್ವದಲ್ಲಿ ಈ ಪ್ರತಿಭಟನೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಕೇಂದ್ರ ಸಹಕಾರಿ ಸಂಘದ ನಿರ್ದೇಶಕರಾದ ಎಸ್ ಎನ್ ಮನ್ಮಥ ರವರು ಮಾತನಾಡಿ ಇಂತಹ ಸಮಸ್ಯೆಗಳು ಬಂದಾಗ ಎಲ್ಲರೂ ಒಗ್ಗೂಡಿ ಪ್ರತಿಭಟಿಸಬೇಕಾಗಿದೆ. ಅವರವರ ಕಾಲು ಬುಡಕ್ಕೆ ಬಂದಾಗ ಮಾತ್ರ ಧ್ವನಿ ಎತ್ತುವುದನ್ನು ಮರೆತು ನಾಡಿನ ರೈತರ ರಕ್ಷಣೆಗಾಗಿ ಮುಂದಿನ ಹೋರಾಟವನ್ನು ಬಿಗಿಗೊಳಿಸೋಣ ಎಂದು ಹೇಳಿದರು. ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ರವರು ಮಾತನಾಡಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಲ್ಲಿ ಆಗುವ ಅನಾಹುತಗಳು ಮತ್ತು ಇದನ್ನು ಜಾರಿಗೆ ತರಲು ಮುಂದಾದ ನಾಸಾ ವಿಜ್ಞಾನಿಯ ಮಾಹಿತಿ ಇಲ್ಲದ ಜ್ಞಾನ ಎಂದು ಹೇಳಿದರು. ಅಲ್ಲದೆ ಪ್ರಸ್ತುತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಂಪೂರ್ಣವಾದ ಮಾಹಿತಿಯನ್ನು ನೀಡಬೇಕು ಇದು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಆಗುವಂತ ಕೆಲಸ ಕಾರ್ಯವಲ್ಲ ರಾಜ್ಯ ಸರ್ಕಾರದ ಪೂರ್ಣ ಪರಿಶ್ರಮ ಬೇಕಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ನಿಹಾಲ್ ಕೋಡ್ತುಗುಳಿ, ಕು. ಕವನ ಬೆಳ್ಳಿಯಪ್ಪ, ಕು. ಮೋಕ್ಷ ವೆಂಕಪ್ಪ ರವರು ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದರು.

ಪ್ರತಿಭಟನಾ ಸಭೆಯಲ್ಲಿ ಅಂತಿಮವಾಗಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿರವರು ಈ ವರದಿ ಜಾರಿಗೆ ಬಂದಲ್ಲಿ ನಮ್ಮ ನಮ್ಮ ಧಾರ್ಮಿಕ ಕೇಂದ್ರಗಳು ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಆರಾಧನೆಗಳಿಗೆ ಸಿಗದಂತೆ ಆಗಬಹುದು ಎಂದು ಹೇಳಿದರು. ಅಲ್ಲದೆ ಈ ವರದಿ ಜಾರಿಗೆ ಬಂದಲ್ಲಿ ಆಗಬಹುದಾದ ವಿವಿಧ ರೀತಿಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಬಳಿಕ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳದಿಂದ ಜಾಥಾ ಮೂಲಕ ಸಾಗಿ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಮುಖಂಡರುಗಳಾದ ಹರೀಶ್ ಕಂಜಿಪಿಲಿ, ಪಿ ಎಸ್ ಗಂಗಾಧರ್, ಸುರೇಶ್ ಅಮೈ, ವಿನಯಕುಮಾರ್ ಕಂದಡ್ಕ ಸೇರಿದಂತೆ ನೂರಾರು ಕೃಷಿಕರು ಭಾಗವಹಿಸಿದ್ದರು.

ಕೃಷಿಕರಾದ ರವಿಕುಮಾರ್ ಭಟ್ ಉಬರಡ್ಕ ಪ್ರಾಸ್ತಾವಿಕ ಮಾತನಾಡಿ ಸಮಿತಿಯ ಸಂಚಾಲಕ ಭುವನೇಂದ್ರ ದಾಸ್ ಸ್ವಾಗತಿಸಿ, ಸಮಿತಿಯ ಸದಸ್ಯರಾದ ಅಶೋಕ್ ಪೀಚೆ ವಂದಿಸಿ, ದುಶ್ಯಂತ್ ಶ್ರೀರಡ್ಕ, ಶ್ರೀಮತಿ ವನಿತಾ ಮೀನಗದ್ದೆ ಕಾರ್ಯಕ್ರಮ ನಿರೂಪಿಸಿದರು.