ಅ.16 ರಿಂದ ಸುಳ್ಯ ದಸರಾ ಆರಂಭ

0

ಅ.22ರಂದು ದಸರಾ ಚಂಡಿಕಾ ಮಹಾಯಾಗ – ಮಹಾ ಅನ್ನಸಂತರ್ಪಣೆ

ಅ.24ರಂದು ವೈಭವದ ಶೋಭಾಯಾತ್ರೆ : ಮುಖ್ಯ ರಸ್ತೆಯಲ್ಲಿ ಟ್ಯಾಬ್ಲೋಗಳಿಗೆ ಅವಕಾಶ

೫೫ ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ - ೨೦೨೬ ಅ.೧೬ರಿಂದ ಆರಂಭಗೊಳ್ಳಲಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಅ.೨೨ರಂದು ದಸರಾ ಚಂಡಿಕಾ ಮಹಾಯಾಗ ನಡೆದು ಮಹಾನ್ನಸಂತರ್ಪಣೆ ನಡೆಯುವುದು. ಅ.೨೪ರಂದು ದಸರಾ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ'' ಎಂದು ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದ್ದಾರೆ. ಅ.೯ರಂದು ಸುಳ್ಯ ಎ.ಪಿ.ಎಂ.ಸಿ.ಯಲ್ಲಿ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಸುಳ್ಯ ದಸರಾ ಉತ್ಸವದ ಕುರಿತು ವಿವರ ನೀಡಿದರು. ಅ.೧೬ರಂದು ಬೆಳಗ್ಗೆ ಗಣಪತಿ ಹವನ ನಡೆಯುವುದು. ಬೆಳಗ್ಗೆ ೯ ಗಂಟೆಗೆ ಸುಳ್ಯ ಲಾಲ್ ಬಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾದೇವಿಯ ಪ್ರತಿಷ್ಠಾ ಮೆರವಣಿಗೆ ಆರಂಭಗೊಳ್ಳುವುದು. ಬಳಿಕ ಶಾರದಾದೇವಿಯ ಪ್ರತಿಷ್ಠೆ ನಡೆಯುವುದು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯುವುದು. ಬಳಿಕ ಶ್ರೀ ಗುರುರಾಘವೇಂದ್ರ ಮಕ್ಕಳ ಕಲಾ ತಂಡ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯುವುದು. ಅ.೧೭ರಂದು ಸಂಜೆ ಜಿಲ್ಲೆಯ ಪ್ರಖ್ಯಾತ ತಂಡವಾದ ಡಿ.ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಹಾಗೂ ಎಕ್ಟಸಿ ಡ್ಯಾನ್ಸ್ ಕ್ರಿವ್ ಸುಳ್ಯ ಇವರಿಂದ ನೃತ್ಯ ವೈಭವ ನಡೆಯುವುದು. ಅ.೧೮ರಂದು ಮಕ್ಕಳ ದಸರಾ ನಡೆಯಲಿದ್ದು ಬೆಳಗ್ಗಿನಿಂದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯುವುದು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟಿ ಇದರ ವಿವಿಧ ಕಲಾವಿದರಿಂದ ನೃತ್ಯ ಸಂಭ್ರಮ ನಡೆಯುವುದು ಅ.೧೯ರಂದು ಮಹಿಳಾ ದಸರಾ ನಡೆಯಲಿದ್ದು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಬೆಳಗ್ಗಿನಿಂದ ನಡೆಯಲಿದೆ. ಸಂಜೆ ರಂಗಮಯೂರಿ ಕಲಾಶಾಲೆ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯುವುದು. ಅ.೨೦ರಂದು ಬೆಳಗ್ಗೆಯಿಂದ ಆಯುಧಪೂಜೆ ನಡೆಯುವುದು. ಸಂಜೆ ಫ್ಯೂಶನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇವರಿಂದ ಡ್ಯಾನ್ಸ್ ಕಾರ್ಯಕ್ರಮ. ಬಳಿಕ ರಾಜ್ಯದ ನುರಿತ ಕಲಾವಿದರಿಂದ ಹಳೆಯ ಚಿತ್ರಗೀತೆಗಳ ಸಂಗಮ ನೆನಪು ನೀನಾದ ನಡೆಯುವುದು. ಅ.೨೧ರಂದು ಬೆಳಗ್ಗೆ ಅಕ್ಷರಾಭ್ಯಾಸ. ಸಂಜೆ ಸೆವೆನ್ ಆಪ್ ಡಾನ್ಸ್ ಆನ್ ಸೀಸನ್ - ೨ ಸೇರಿದಂತೆ ಹಲವು ದಕ್ಷಿಣ ಭಾರತ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ವಿಜೇತ ಮತ್ತು ರನ್ನರ್ ಆಫ್ ಸ್ಥಾನಗಳನ್ನು ಪಡೆದ ಸಿಝ್ಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೋ ಮಂಗಳೂರು ಇವರಿಂದ ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ನಡೆಯುವುದು. ಅ.೨೨ರಂದು ಸಂಜೆ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ನಡೆಯುವುದು. ಹಾಗೂ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣವೂ ನಡೆಯುವುದು. ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅ.೨೩ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು ಬಳಿಕ ಷರಾ ಫೌಂಡೇಶನ್ ಅರ್ಪಿಸುವ - ಕಡಲ್ ತಂಡದವರಿಂದ ಹೆಸರಾಂತ ಗಾಯಕರಾದ ಅಖಿಲ ಪಜಿಮಣ್ಣು, ಗಣೇಶ್ ಕಾರಂತ್, ಅಮಿಶ್, ವೈಷ್ಣವಿ ಕಿಣಿ ಇವರ ಸಮಾಗಮದಲ್ಲಿ ರೇಡಿಯೋ ಜಾಕಿ ಆರ್‌ಜೆ ಅನುರಾಗ್ ಇವರ ನಿರೂಪಣೆಯೊಂದಿಗೆ ಸಂಗೀತ ರಸಮಂಜರಿ ಮ್ಯೂಸಿಕ್ ಹಂಗಾಮ ನಡೆಯಲಿದೆ. ಅ.೨೪ರಂದು ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆ ನಡೆಯುವುದು. ಮಧ್ಯಾಹ್ನದ ಮಹಾಪೂಜೆಯ ಬಳಿಕ ೩ ಗಂಟೆಗೆ ಶೋಭಾಯಾತ್ರೆ ಆರಂಭಗೊಳ್ಳುವುದು. ಚೆನ್ನಕೇಶವ ದೇವಸ್ಥಾನ ಬಳಿಯಿಂದ ಶಾರದಾ ದೇವಿಯ ಶೋಭಾಯಾತ್ರೆ ಆರಂಭಗೊಳ್ಳುವುದು. ಶೋಭಾಯಾತ್ರೆಯಲ್ಲಿ ಭಾಗವಹಿಸುವ ಎಲ್ಲ ಟ್ಯಾಬ್ಲೋಗಳು ಓಡಾಬಾಯಿಯಲ್ಲಿ ಸೇರಿ ಶಾರದಾ ದೇವಿಯ ಟ್ಯಾಬ್ಲೋ ಅಲ್ಲಿಗೆ ತಲುಪಿದ ಬಳಿಕ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಮಾತ್ರ ಟ್ಯಾಬ್ಲೋಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದವರು ವಿವರ ನೀಡಿದರು. ಪ್ರತೀದಿನ ೬ ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡು, ರಾತ್ರಿ ೧೦.೩೦ರೊಳಗೆ ಮುಕ್ತಾಯಗೊಳ್ಳಲಿದೆ. ಅದೇ ರೀತಿ ಶೋಭಾಯಾತ್ರೆಯೂ ಸರಿಯಾದ ಸಮಯಕ್ಕೆ ಮುಗಿಸಬೇಕಾಗಿರುವುದರಿಂದ ಟ್ಯಾಬ್ಲೋಗಳಿಗೆ ಸುಳ್ಯ ನಗರದ ರಸ್ತೆಯಲ್ಲಿ ಅವಕಾಶ ನೀಡಲಾಗಿದೆ. ಎಲ್ಲ ಸಾರ್ವಜನಿಕರು ತಮ್ಮ ವಾಹನಗಳನ್ನು ಮುಖ್ಯರಸ್ತೆಗೆ ತರದೇ ನಡೆದುಕೊಂಡೇ ಬಂದು ಟ್ಯಾಬ್ಲೋಗಳನ್ನು ವೀಕ್ಷಣೆ ಮಾಡಬೇಕೆಂದು ಅವರು ಕೇಳಿಕೊಂಡರು. ಜೆಯಿಂಟ್ ವ್ಹೀಲ್ ಜಾಗದಲ್ಲಿ ಓಪನ್ ಸ್ಟೇಜ್ : ಜೆ.ಪಿ.ರೈ ಪತ್ರಿಕಾಗೋಷ್ಠಿಯಲ್ಲಿದ್ದ ಶಾರದಾಂಬ ಉತ್ಸವ ಸಮಿತಿಯ ಗೌರವ ಸಲಹೆಗಾರರಾದ ಎನ್.ಜಯಪ್ರಕಾಶ್ ರೈ ಮಾತನಾಡಿ, ಜಾತ್ರೆಯ ಸಂದರ್ಭ ಜೆಯಿಂಟ್ ವ್ಹೀಲ್ ಹಾಕಲಾಗುವ ಜಾಗದಲ್ಲಿ ಓಪನ್ ಸ್ಟೇಜ್ ಆದರೆ ಎಲ್ಲ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ. ಅದು ಈಗ ದೇವಸ್ಥಾನದ ಜಾಗವಾಗಿರುವುದರಿಂದ ದೇವಸ್ಥಾನದವರೊಂದಿಗೆ ಮಾತನಾಡಿಕೊಂಡು ಮುಂದೆ ಹೋಗುತ್ತೇವೆ. ಅಲ್ಲಿ ಸ್ಟೇಜ್ ಆದರೆ ಈಗ ಕಾರ್ಯಕ್ರಮ ಆಗುವಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಆದಂತಾದರೆ ಒಳ್ಳೆಯದು. ಇದು ನಮ್ಮ ಯೋಚನೆ. ಎಷ್ಟು ಕಾರ್ಯಗತ ಆಗುತ್ತದೋ ನೋಡುತ್ತೇವೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಲ್ಲರ ಸಹಕಾರ ಬೇಕು. ಇದು ಆದರೆ ದಸರಾಕೆ ಹೆಚ್ಚು ಪಾವಿತ್ರ್ಯತೆ ಬರುತ್ತದೆ. ಮುಂದೆ ಎಲ್ಲ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅದೊಂದು ಉತ್ತಮ ವ್ಯವಸ್ಥೆ ಆದಂತಾಗುತ್ತದೆ” ಎಂದವರು ಹೇಳಿದರು. ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್ ಚಂಡಿಕಾಯಾಗದ ಕುರಿತು ವಿವರ ನೀಡಿದರೆ, ಮಹಿಳಾ ದಸರಾದ ಕುರಿತು ಸಮಿತಿ ಅಧ್ಯಕ್ಷೆ ಶ್ರೀಮತಿ ಯಶೋದ ರಾಮಚಂದ್ರ ಮಾಹಿತಿ ನೀಡಿದರು

ಪತ್ರಿಕಾಗೋಷ್ಠೀಯಲ್ಲಿ ಶಾರದಾಂಬ ಉತ್ಸವ ಸಮಿತಿಯ ಗೌರವ ಸಲಹೆಗಾರರಾದ ಎನ್.ಎ. ರಾಮಚಂದ್ರ, ಶಾರದಾಂಬ ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ.ಸತೀಶ್, ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಮಹಿಳಾ ಸಮಿತಿ ಉಪಾಧ್ಯಕ್ಷರುಗಳಾದ ಶ್ರೀಮತಿ ಲತಾ ಮಧುಸೂಧನ್, ಬೆಳ್ಯಪ್ಪ ಗೌಡ ಬಳ್ಳಡ್ಕ, ದಸರಾ ಉತ್ಸವ ಸಮಿತಿಯ ಕೋಶಾಧಿಕಾರಿ ಸುನಿಲ್ ಕುಮಾರ್ ಕೇರ್ಪಳ ಉಪಸ್ಥಿತರಿದ್ದರು.