ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾಗಿ ಪಿ.ಎಸ್.ಗಂಗಾಧರ್ ಅಧಿಕಾರ ಸ್ವೀಕಾರ

0

ಅತ್ಯಂತ ಅನುಭವಿ, ಸೂಕ್ತ ವ್ಯಕ್ತಿ ಅಧ್ಯಕ್ಷರಾಗಿದ್ದಾರೆ

ಹಲವಾರು ಮಂದಿ ಹಿತೈಷಿಗಳಿಂದ ಅಭಿನಂದನೆ – ಶುಭಹಾರೈಕೆ

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಾಮಾಜಿಕ ಮುಂದಾಳು ಪಿ.ಎಸ್.ಗಂಗಾಧರ್ ರವರ ಪದಗ್ರಹಣ ಕಾರ್ಯಕ್ರಮ ಅ.12 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪದಗ್ರಹಣ ಮತ್ತು ನೂತನ ಗ್ಯಾರಂಟಿ ಸಮಿತಿಯ ಪ್ರಥಮ ಸಭೆ ಅ.12 ರಂದು ತಾ.ಪಂ.ನಲ್ಲಿ ಆಯೋಜನೆಗೊಂಡಿತ್ತು. ಸಭೆಯ ಆರಂಭದಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣರವರು ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು ” ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲೆಯ ಮತ್ತು ಸುಳ್ಯ ತಾಲೂಕಿನ ಗ್ಯಾರಂಟಿ ಅನುಷ್ಟಾನ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ರಾಜ್ಯದಲ್ಲೇ ಉತ್ತಮ ಹೆಸರು ಗಳಿಸಿವೆ. ಸಮಿತಿಯ ಪ್ರಥಮ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇದೀಗ ಹೊಸ ಸಮಿತಿಯನ್ನು ನೇಮಕ ಮಾಡಿದ್ದು, ಸರಕಾರ ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಪಾಲಿಸಿಕೊಂಡು ಈ ಸಮಿತಿಯು ಜನರಿಗೆ ಗ್ಯಾರಂಟಿ ಯೋಜನೆಗಳು ಸಿಗುವಂತೆ ದುಡಿಯಬೇಕಾಗಿದೆ. ಸುಳ್ಯ ತಾಲೂಕು ಸಮಿತಿಯ ನೂತನ ಅಧ್ಯಕ್ಷ ಪಿ.ಎಸ್.ಗಂಗಾಧರ್ ಹಲವಾರು ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿದ್ದು, ತನ್ನ ಅನುಭವ ಮತ್ತು ಜನಸಂಪರ್ಕದಿಂದ ಜನರ ವಿಶ್ವಾಸ ಗಳಿಸಿರುವವರು. ಅವರಿಗೆ ಮತ್ತು ಸವರ ತಂಡಕ್ಕೆ ಶುಭಹಾರೈಸುತ್ತೇನೆ ” ಎಂದು ಹೇಳಿ, ಗಂಗಾಧರ್ ರಿಗೆ ಹೂಗುಚ್ಛ ನೀಡಿ ಅಭಿನಂದಿಸಿ ಕಡಬದ ಕಾರ್ಯಕ್ರಮಕ್ಕೆ ತೆರಳಿದರು.

ಬಳಿಕ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ತಾ.ಪಂ.ಉಪಾಧ್ಯಕ್ಷ ಪಿ.ಸಿ.ಜಯರಾಮ್, ಮಾಜಿ ತಾ.ಪಂ.ಸದಸ್ಯ ಸೋಮಶೇಖರ್ ಕೊಯಿಂಗಾಜೆ, ಗ್ಯಾರಂಟಿ ಸಮಿತಿ ಸದಸ್ಯ ಹಾಗೂ ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಎಂ.ಎಚ್., ಗ್ಯಾರಂಟಿ ಸಮಿತಿ ಸದಸ್ಯೆ ಹಾಗೂ ಜಾಲ್ಸೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಬಡ್ಕ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ತಾ.ಪಂ.ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ ಸಂಕೇಶ, ಸಹಕಾರ ರತ್ನ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಸೊಸೈಟಿ ಮಾಜಿ ಉಪಾಧ್ಯಕ್ಷ ದಿನೇಶ್ ಸರಸ್ವತಿಮಹಲ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ತಂಡದ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಜೇಸೀ ರಾಷ್ಟ್ರೀಯ ಪದಾಧಿಕಾರಿ ಅಶೋಕ್ ಚೂಂತಾರು, ಸಂಪಾಜೆ ಸೊಸೈಟಿ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಯುವಜನ ಸಂಯುಕ್ತ ಮಂಡಳಿ ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಹಿಂದಿನ ಸಮಿತಿ ಸದಸ್ಯ ಸೋಮಶೇಖರ ಕೇವಳ ಮೊದಲಾದವರು ಪಿ.ಎಸ್.ಗಂಗಾಧರ್ ರನ್ನು ಮತ್ತು ಸಮಿತಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.
ಬಳಿಕ ಸಭೆಗೆ ಬಂದಿದ್ದ ಹಲವಾರು ಮಂದಿ ಹಿತೈಷಿಗಳು ಪಿ.ಎಸ್.ಗಂಗಾಧರ್ ರಿಗೆ ಮಾಲಾರ್ಪಣೆಗೈದು ಅಭಿನಂದಿಸಿದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಪಿ.ಎಸ್.ಗಂಗಾಧರ್ ರವರು ತಾನು ಸಕ್ರಿಯ ರಾಜಕೀಯಕ್ಕೆ ಬರಲು ಕಾರಣರಾದವರನ್ನು , ತನ್ನ ರಾಜಕೀಯದ ಪ್ರಥಮ ಮಾರ್ಗದರ್ಶಿ ದಿ.ಚೂಂತಾರು ಕೂಸಪ್ಪ ಗೌಡ ಹಾಗೂ ದಿ.ಮದುವೆಗದ್ದೆ ಭೋಜಪ್ಪ ಗೌಡರನ್ನು ಸ್ಮರಿಸಿಕೊಂಡರು.
” ಗ್ಯಾರಂಟಿ ಸಮಿತಿಯ ಹಿಂದಿನ ಅಧ್ಯಕ್ಷ ಶಾಹುಲ್ ಹಮೀದ್ ಹಾಗೂ ಅವರ ನೇತೃತ್ವದ ಸಮಿತಿ ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನಾವು ಕೂಡ ನಿಮ್ಮೆಲ್ಲರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಎಲ್ಲರ ಸಹಕಾರ ಇರಲಿ ” ಎಂದು ಹೇಳಿದರು.

ಆ ಬಳಿಕ ನೂತನ ಗ್ಯಾರಂಟಿ ಸಮಿತಿಯ ಪ್ರಥಮ ಸಭೆಯನ್ನು ಆರಂಭಿಸಲಾಯಿತು.