ಬೆಳ್ಳಾರೆ ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ-ಧಾರ್ಮಿಕ ಸಭೆ

0

ದೇವಾಲಯ ನಿರ್ಮಾಣ ನಮ್ಮೆಲ್ಲರ ಸಂಕಲ್ಪವಾಗಬೇಕು : ಎಡನೀರು ಶ್ರೀ

ನಮ್ಮ ಜೀವಿತಾವಧಿಯಲ್ಲಿ ಒಂದು ದೇವಸ್ಥಾನ ನಿರ್ಮಾಣವಾಗುವುದು ಮತ್ತು ನಾವು ಅದರಲ್ಲಿ ಭಾಗಿಗಳಾಗುವುದು ನಮ್ಮ ಜೀವನದ ಪುಣ್ಯ ಫಲ. ನಮ್ಮೂರಿನ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಭಾಗಿಗಳಾಗುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಿಕೊಂಡಾಗ ದೇವಸ್ಥಾನ ಶೀಘ್ರವಾಗಿ ಬ್ರಹ್ಮಕಲಶವಾಗಿ ತಾಯಿ ರಾಜರಾಜೇಶ್ವರಿ ಬಾಲಾಲಯದಿಂದ ಮೂಲಾಲಯದಲ್ಲಿ ಪ್ರತಿಷ್ಠಾಪನೆಯಾಗಲು ಸಾಧ್ಯ ಎಂದು ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಹೇಳಿದರು.

ಅವರು ಬೆಳ್ಳಾರೆಯ ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುವುದು ನಮಗೆ ದೇವಿ ನೀಡಿದ ಅಪೂರ್ವ ಅವಕಾಶ. ಪ್ರಶಾಂತ ಸುಂದರ ವಾತಾವರಣದ ಸುಂದರವಾದ ಪ್ರಕೃತಿಯ ಮಧ್ಯೆ ವಿಶಾಲವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನ ಇಡೀ ನಾಡಿಗೆ ಐಶ್ವರ್ಯ, ಸಮೃದ್ಧಿ ತರಲಿದೆ ಎಂದರು. ಕುಂಬಳೆ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಕೆ. ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಊರಿನ ದೇವಸ್ಥಾನ ಅಭಿವೃದ್ಧಿ ಆದರೆ ಇಡೀ ಊರೇ ಅಭಿವೃದ್ಧಿ ಆದಂತೆ. ದೇವಸ್ಥಾನ ನಿರ್ಮಾಣ ಮಾಡಯವುದರ ಜೊತೆಗೆ ದೇವಾಲಯದ ನಿರ್ವಹಣೆ ಮತ್ತು ಪರಿಪಾಲನೆ ಕೂಡ ಅಷ್ಟೇ ಮುಖ್ಯ. ಸ್ವಚ್ಚತೆ ಇದ್ದಾಗ ಪಾವಿತ್ರ್ಯತೆ ಬೆಳೆಯುತ್ತದೆ ಎಂದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ದೇವಾಲಯಗಳ
ಅಭಿವೃದ್ಧಿಗೆ ಮತ್ತು ಧಾರ್ಮಿಕ ಕ್ಷೆತ್ರಕ್ಕೆ ನಾವು ನೀಡುವ ಕೊಡುಗೆ ಶತಮಾನಗಳ ಕಾಲ ನೆನಪಿಸಿಕೊಳ್ಳುತ್ತದೆ. ನಾವು ಸಂಪಾದನೆ‌ ಮಾಡುವ ಗಳಿಕೆಯ ಒಂದಂಶವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ಸಮಾಜಕ್ಕೆ ಅರ್ಪಿಸಿದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ. ಮುಂದಿನ ಡಿಸೆಂಬರ್ ತಿಂಗಳ ನಂತರ ನಾನು ನನ್ನ ತಂಡದೊಂದಿಗೆ ಒಂದಷ್ಟು ದೇಣಿಗೆ ಸಂಗ್ರಹಿಸಿ ದೇವಸ್ಥಾನ ನೀಡುತ್ತೇನೆ. ದೇವಸ್ಥಾನ ಆದಷ್ಟು ಶೀಘ್ರದಲ್ಲಿ ನಿರ್ಮಾಣಗೊಳ್ಳಲಿ ಎಂದರು.
ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಗೌರೀಪುರಂ ಶ್ರೀ ರಾಜರಾಜೇಶ್ವರಿ
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ಕಾರ್ಯಾಧ್ಯಕ್ಷರುಗಳಾದ ಆರ್.ಕೆ.ಭಟ್ ಕುರುಂಬುಡೇಲು, ದೇವಿಪ್ರಸಾದ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಈಶ್ವರ ವಾರಣಾಶಿ,ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು, ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಆನಂದ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಈಶ್ವರ ವಾರಣಾಶಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ವಂದಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ನೂತನವಾಗಿ ನಿರ್ಮಾಣವಾಗಿರುವ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಪೌಳಿಯ ಅಡಿಪಾಯ ಮತ್ತು ಹಳೆಯ ದೇವಸ್ಥಾನದ ಪಳೆಯುಳಿಕೆಗಳನ್ನು ಶ್ರೀ ಗಣ್ಯರು ವೀಕ್ಷಿಸಿದರು.

ಅ. 20ರ ತನಕ ನವರಾತ್ರಿ ಉತ್ಸವ

ಶ್ರೀ ಕ್ಷೇತ್ರದಲ್ಲಿ ಅ. 20 ರ ತನಕ ನವರಾತ್ರಿ ಉತ್ಸವಗಳು ವಿಜೃಂಭಣೆಯಿಂದ ಜರಗಲಿದ್ದು,
ಅ. 15ರಂದು ಬೆಳಿಗ್ಗೆ 7.00ರಿಂದ ಗಣಪತಿ ಹೋಮ, ವಾಹನ ಪೂಜೆ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ 5.30ರಿಂದ ಕ್ಷೇತ್ರದ ತಂತ್ರಿಗಳ ಮುಂದಾಳತ್ವದಲ್ಲಿ ಶ್ರೀಚಕ್ರ ದುರ್ಗಾಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಅ. 13ರಂದು ಪೆರ್ಲಂಪಾಡಿ ನಾಟ್ಯರಂಗ ತಂಡದಿಂದ ಯಕ್ಷಗಾನ ಕೃಷ್ಣಲೀಲೆ ಕಂಸವಧೆ, ಅ. 14ರಂದು ಶ್ರೀ ಮಹಾವಿಷ್ಣು ಸಿಂಗಾರಿಮೇಳ ಬಾಳಿಲ ಮುಪ್ಪೇರ್ಯ ಇವರಿಂದ ಯಕ್ಷಗಾನ ತಾರಾಕ್ಷಿ ಮದನಾವಳಿ-ವೀರಮಣಿ ಕಾಳಗ, ಅ. 15ರಂದು ಯಜ್ಞೇಶ್ ಆಚಾರ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಬಳಗದಿಂದ ಭಕ್ತಿ ಸಂಗೀತ, ಅ. 16ರಂದು ತಿಂಗಳಾಡಿ ನಾಟ್ಯಾಭಿಯೋಗಿ ನೃತ್ಯಶಾಲಾ ತಂಡದಿಂದ ನೃತ್ಯಾರ್ಪಣಂ, ಅ. 17ರಂದು ಸ್ಥಳೀಯರಿಂದ ಕಾರ್ಯಕ್ರಮ ವೈವಿಧ್ಯ, ಅ. 18ರಂದು ಪುತ್ತೂರಿನ ವರ್ಣಕಟೀರ ಕಲ್ಲಾರೆಯವರಿಂದ ಭಕ್ತಿ ರಸಮಂಜರಿ, ಅ. 19ರಂದು ಅಂಕತ್ತಡ್ಕ ಸುಮಚರಣಂ ನಾಟ್ಯಾಲಯ ತಂಡದಿಂದ ಭರತನಾಟ್ಯ ಮತ್ತು ಅ. 20ರಂದು ವಿಧುಷಿ ಶ್ರೀಲತಾ ನಿಕ್ಷಿತ್ ತಂಡದಿಂದ ವೀಣಾಮೃದಂಗ ಯುಗಳವಾದನ ನಡೆಯಲಿದೆ. ಪ್ರತೀದಿನ ರಾತ್ರಿ ಭಜನಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.