ಶಾರದೆಯ ಆರಾಧನೆಯಿಂದ ಜ್ಞಾನ ಸಂಪಾದಿಸಲು ಸಾಧ್ಯ – ಶ್ರೀಮತಿ ಶ್ರೀದೇವಿ ನಾಗರಾಜ್

ವಿದ್ಯೆ ಅಂದರೆ ಬರೇ ಓದುವುದು, ಬರೆಯುವುದು ಮಾತ್ರ ಅಲ್ಲ. ಅದು ಜ್ಞಾನ ಸಂಪಾದನೆ, ಅದು ಕಲೆ. ವಿದ್ಯೆ ನಮ್ಮ ಜೀವನವನ್ನು ರೂಪಿಸುತ್ತೆ. ಜ್ಞಾನ ತಾಯಿ ಶಾರದೆಯಿಂದ ಅನುಗ್ರಹಿಸಲ್ಪಡ್ತದೆ. ಅದಕ್ಕಾಗಿ ಶಾರದೋತ್ಸವಕ್ಕೆ ವಿಶೇಷ ಮಾನ್ಯತೆ ಇದೆ ಎಂದು ಕೇಶವ ಕೃಪಾ ರಾಷ್ಟ್ರ ಸೇವಿಕಾ ಜಿಲ್ಲಾ ಪ್ರಮುಖ್ ಶ್ರೀಮತಿ ಶ್ರೀದೇವಿ ನಾಗರಾಜ್ ಹೇಳಿದರು. ಅವರು ಅ. 17ರಂದು ಕಲ್ಮಡ್ಕದ ವೈದೇಹಿ ಯುವತಿ ಮಂಡಲದ ಆಶ್ರಯದಲ್ಲಿ ಕಲ್ಮಡ್ಕದ ಶ್ರೀ ರಾಮ ಮಂದಿರದಲ್ಲಿ ನಡೆದ ಸಾರ್ವಜನಿಕ ಶ್ರೀ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.















ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಮಡ್ಕ ಶ್ರೀ ರಾಮ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಜೆ. ಗೋವಿಂದಯ್ಯ ಸಾಕೇತ ವಹಿಸಿದ್ದರು. ಕಲ್ಮಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಗೋಳ್ತಾಜೆ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಕಟ್ಟೆಹಿತ್ಲು ಅತಿಥಿಯಾಗಿ ಭಾಗವಹಿಸಿದ್ದರು. ಯಕ್ಷಗಾನ ಕಾರ್ಯಕ್ರಮದ ಪ್ರಾಯೋಜಕರಾದ ಸವಿತಾಲಕ್ಷ್ಮಿ ಡಿ, ವೈದೇಹಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಪರಮೇಶ್ವರಯ್ಯ ಮತ್ತು ಉತ್ಸವ ಸಮಿತಿ ಅಧ್ಯಕ್ಷೆ ಶ್ರೀಮತಿ ವಿಮಲ ಜೋಗಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಬಳ್ಪ ಉ.ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಮಾಳಪ್ಪಮಕ್ಕಿಯವರಿಗೆ ಸನ್ಮಾನ ಮತ್ತು 2026ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 612 ಅಂಕಗಳನ್ನು ಪಡೆದ ಕು. ತನುಷಾರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಕು. ಹರ್ಷಿತಾ, ಕು. ಜೀವಿತಾ ಮತ್ತು ಕು. ದೀಪ್ತಿ ಪ್ರಾರ್ಥಿಸಿದರು. ಕು. ಹರ್ಷಿತಾ ಮತ್ತು ಕು. ದೀಪ್ತಿ ಬೊಮ್ಮೆಟ್ಟಿ ಸನ್ಮಾನಪತ್ರ ವಾಚಿಸಿದರು. ಕು. ಜೀವತಾ ಸ್ವಾಗತಿಸಿ, ಭಾಗೀರಥಿ ಕಾಚಿಲ ವಂದಿಸಿದರು. ಯುವತಿ ಮಂಡಲದ ಕೋಶಾಧಿಕಾರಿ ಕು. ಅಶ್ವಿನಿ ಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯುವತಿ ಮಂಡಲದ ಸದಸ್ಯೆ ಶ್ರೀಮತಿ ನಳಿನಿ ರೈಯವರು
ವೈದೇಹಿ ಯುವತಿ ಮಂಡಲವನ್ನು ಹುಟ್ಟು ಹಾಕಿ ಊರಿನವರನ್ನು ಒಟ್ಟು ಸೇರಿಸುವ ಕೆಲಸ ಮಾಡಿದವರು ಶ್ರೀಮತಿ ರೂಪ ಸಾಯಿನಾರಾಯಣರು. ಯಾರೊಂದಿಗೂ ತಾರತಮ್ಯವಿಲ್ಲದೆ ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವ, ಜೊತೆಯಾಗಿ ಕೊಂಡೊಯ್ಯುವ ವಿಶೇಷ ಗುಣ ಅವರಲ್ಲಿತ್ತು ಎಂದರು.
ಬಾಕ್ಸ್
ಬೆಳಿಗ್ಗೆ ಶಾರದಾ ದೇವಿಯ ಪ್ರತಿಷ್ಠೆ, ಪೂಜೆ, ಗಣಪತಿ ಹೋಮ, ಸ್ತೋತ್ರ ಪಾರಾಯಣ, ಭಜನೆ, ಅಕ್ಷರಾಭ್ಯಾಸ, ವಾಹನಪೂಜೆ, ಮಧ್ಯಾಹ್ನ ಮಂಗಳಾರತಿ, ಪ್ರಸಾದ ಭೋಜನ ನಡೆಯಿತು.
ಅಪರಾಹ್ನ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ -ಮುಪ್ಪೇರ್ಯ ಮಕ್ಕಳ ಯಕ್ಷಗಾನ ತಂಡದಿಂದ ಯಕ್ಷಗಾನ ಬಯಲಾಟ ಬಬ್ರುವಾಹನ ಕಾಳಗ ನಡೆಯಲಿದೆ. ಸಂಜೆ 5ರಿಂದ ಸೇವಾ ಸಮನ್ವಯ ಚತ್ರಪತಿ ನಾಸಿಕ್ ಬ್ಯಾಂಡ್ ಕಲ್ಮಡ್ಕ ಇವರ ನಾಸಿಕ್ ಬ್ಯಾಂಡ್ ಮತ್ತು ಎಸ್.ವಿ. ಬಳಗ ಕಲ್ಮಡ್ಕ ಇವರಿಂದ ಗೊಂಬೆಯಾಟ ಮತ್ತು ಶ್ರೀ ರಾಮ ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆಯೊಂದಿಗೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಲಿದೆ.







