ನವಂಬರ್ ತಿಂಗಳ ಪ್ರತಿ ಆದಿತ್ಯವಾರ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲುನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
ಸುಳ್ಯ ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನವಂಬರ್ ತಿಂಗಳ ಪ್ರತಿ ಐದು ಆದಿತ್ಯವಾರದಂದು ಸುಳ್ಯ ನಗರದ ವಿವಿಧಡೆ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.














ಅ 16 ರಂದು ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಾಮಾಜಿಕ ಮುಖಂಡರುಗಳು ಮತ್ತು ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿ ಸಂಸ್ಥೆಯ ಕಾರ್ಯಕ್ರಮದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡು, ಸಹಕಾರ ನೀಡುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ನಗರದ ಸ್ವಚ್ಛತೆ ಮತ್ತು ಸುಂದರೀಕರಣವನ್ನು ಉದ್ದೇಶವಾಗಿಟ್ಟುಕೊಂಡು, ಒಂದು ತಿಂಗಳ ಕಾಲ ಜನಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಬೇಕೆಂಬ ಆಲೋಚನೆಯನ್ನು ನಮ್ಮ ಸಂಸ್ಥೆಯು ಹೊಂದಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೆ ಬಿ ರವರು ತಿಳಿಸಿದರು.
ನಗರದ ಐದು ಪ್ರಮುಖ ಪ್ರದೇಶಗಳಲ್ಲಿ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ, ಬದ್ಧತೆಯಿಂದ ಮತ್ತು ಜವಾಬ್ದಾರಿಯುತವಾಗಿ ನಡೆಸಲು ತೀರ್ಮಾನಿಸಲಾಯಿತು.
ನ 1ರಂದು ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಮುಖಂಡರುಗಳು ತಿಳಿಸಿದರು.ಒಂದು ತಿಂಗಳ ಅವಧಿಯಲ್ಲಿ, ಐದು ಭಾನುವಾರಗಳನ್ನು ಒಳಗೊಂಡಂತೆ ಈ ಸ್ವಚ್ಛತಾ ಅಭಿಯಾನವನ್ನು ಅತ್ಯಂತ ಶಿಸ್ತುಬದ್ಧವಾಗಿ, ಸಮರ್ಪಣಾ ಮನೋಭಾವದಿಂದ ಮತ್ತು ಎಲ್ಲರ ಸಹಕಾರದೊಂದಿಗೆ ನಡೆಸಲಿದ್ದು,ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ; ನಮ್ಮ ನಗರದ ಸ್ವಚ್ಛತೆ, ಸೌಂದರ್ಯ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಸಾಮಾಜಿಕ ಜವಾಬ್ದಾರಿಯ ಅಭಿಯಾನವಾಗಿದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಸೂಡ ಅಧ್ಯಕ್ಷರಾದ ಕೆಎಂ ಮುಸ್ತಫ ರವರು ಅಭಿಯಾನದ ಬಗ್ಗೆ ಸಭೆಗೆ ತಿಳಿಸಿದರು.







