ಸೇವೆಯ ಮೂಲಕ ದೇವರನ್ನು ಕಾಣುವುದು ಸುಂದರ ಅವಕಾಶ : ಮೌನೇಶ್ ವಿಶ್ವಕರ್ಮ















ಹಬ್ಬದ ಸಂದರ್ಭದಲ್ಲಿ ಸಮಾಜ ಸೇವೆಯ ಮೂಲಕ ಜನರಲ್ಲಿ ದೇವರನ್ನು ಕಾಣುವುದು ಸುಂದರ ಅವಕಾಶ. ನಮ್ಮ ಸೇವೆಯಿಂದ ಬದಲಾವಣೆಯ ಜೊತೆಗೆ ಶಾಶ್ವತ ಪರಿಹಾರವೂ ದೊರೆಯುವಂತಗಬೇಕು ಎಂದು ರೋಟರಿ ಜಿಲ್ಲಾ ನಮ್ಮ ಹಬ್ಬ ನಮ್ಮ ಸೇವೆ ವಿಭಾಗದ ಉಪಾಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದರು. ಅವರು
ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇದರ ಸಹಯೋಗದಲ್ಲಿ ಆಯೋಜಿಸಲಾದ ನವರಂಗ್ ನಮ್ಮ ಹಬ್ಬ ನಮ್ಮ ಸೇವೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಳೆದ ಮೂರು ತಿಂಗಳಲ್ಲಿ ರೋಟರಿ ಜಿಲ್ಲೆಯ ವಿವಿಧ ಘಟಕಗಳು ನಮ್ಮ ಹಬ್ಬ ನಮ್ಮ ಸೇವೆಯ ಮೂಲಕ ಹಲವಾರು ಸೇವಾ ಕಾರ್ಯಗಳನ್ನು ನಡೆಸಿವೆ. ದಸರಾ ಸಂದರ್ಭದಲ್ಲಿ ಒಂಬತ್ತು ದಿನ ಒಬತ್ತು ಸೇವೆಯ ಸಂಕಲ್ಪದೊಂದಿಗೆ ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಜ್ಞಾನದೀಪ ಸಂಸ್ಥೆಯ ಸಹಯೋಗದೊಂದಿಗೆ ವಿಶಿಷ್ಟ ರೀತಿಯಲ್ಲಿ ಸೇವಾ ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದು ಮೌನೇಶ್ ಹೇಳಿದರು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಾಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರೋಶನ್ ಫೆರ್ನಾಂಡಿಸ್, ರೋಟರಿಯ ಝೋನಲ್ ಲೆಫ್ಟಿಂನೆಂಟ್ ಚಂದ್ರಶೇಖರ್ ರೈ, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಕೀರ್ತನಾ ಪಿ ಉಪಸ್ಥಿತರಿದ್ದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ ಸ್ವಾಗತಿಸಿದರು.ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಕಾರ್ಯದರ್ಶಿ ಪ್ರಶಾಂತ್ ಟಿ ಎಂ ವಂದಿಸಿದರು. ಉಪನ್ಯಾಸಕ ವಿಜೇತ್ ಸುವರ್ಣ ಕೆ ವಿ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿ ಶಿಕ್ಷಕಿಯಿಂದ ಕೇಶದಾನ
ಕ್ಯಾನ್ಸರ್ ಪೀಡಿತರಿಗೆ ನೇರವಾಗಲು ಸುಳ್ಯದ ಅಮೃತ ಗಂಗಾ ಸೇವಾ ಸಂಸ್ಥೆಗೆ ಜ್ಞಾನದೀಪ ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿ ಐಶ್ವರ್ಯ ಕೇಶದಾನ ಮಾಡಿದರು. ಅಮೃತ ಗಂಗಾ ಸೇವಾ ಸಂಸ್ಥೆಯ ಸ್ಥಾಪಕ ಉದಯ್ ಭಾಸ್ಕರ್ ಸುಳ್ಯ ಕೇಶವನ್ನು ಸ್ವೀಕರಿಸಿದರು. ಸಮಾರೋಪ ಸಮಾರಂಭಕ್ಕೂ ಮೊದಲು ಸಂಕಲ್ಪ ನವರಂಗ್ ಅಂಗವಾಗಿ ಉದಯ ಭಾಸ್ಕರ್ ಸುಳ್ಯ ರಕ್ತದಾನ ಮತ್ತು ಕೇಶದಾನ ದ ಬಗ್ಗೆ ಮಾಹಿತಿ ನೀಡಿದ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ರೋಟರಿ ಸದಸ್ಯರು 9 ಸೇವಾ ಸಂಕಲ್ಪದ ಪ್ರತಿಜ್ಞೆ ಸ್ವೀಕರಿಸಿದರು.







