” ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನಲ್ಲಿ ಸಿಇಟಿ ಕೋಚಿಂಗ್ ಹೆಸರಿನಲ್ಲಿ ಅನಧಿಕೃತವಾಗಿ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ” ಎಂದು ಆರೋಪಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅ.20 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಶುಲ್ಕ ಪಡೆಯದಂತೆ ವಿನಂತಿಸಿದ್ದಾರೆ.















” ಕಳೆದ ಕೆಲವು ವರ್ಷಗಳಿಂದ ಕಾಲೇಜಿನಲ್ಲಿ ಯಾವುದೇ ಅಧಿಕೃತ ಅನುಮತಿಯಿಲ್ಲದೆ ಸಿಇಟಿ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳಿಂದ ತಲಾ ಸುಮಾರು ₹16,000 ರಶೀದಿ ನೀಡದೆ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಪ್ರಶ್ನಿಸಿದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಗದರಿಸಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಎಬಿವಿಪಿ ತನ್ನ ಮನವಿಯಲ್ಲಿ ತಿಳಿಸಿದೆ.
ಮನವಿ ಸ್ವೀಕರಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿಯವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಅರ್ಪಿಸಿದಾಗ ಅವರು ನಮಗೆ ಸ್ಪಂದಿಸದೆ ವಾದಕ್ಕೆ ಇಳಿದಿರುವುದು ನಮಗೆ ಅಸಮಾಧಾನ ತಂದಿದೆ ” ಎಂದು ಎ.ಬಿ.ವಿ.ಪಿ. ಹೇಳಿಕೆಯಲ್ಲಿ ತಿಳಿಸಿದೆ.
ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್ ರವರು ಹೇಳಿಕೆ ನೀಡಿ “ಅಧ್ಯಕ್ಷರು ನಮ್ಮ ಮನವಿಗೆ ಉತ್ತಮವಾಗಿ ಸ್ಪಂದಿಸಿ, ಮುಂದಿನ ವರ್ಷದಿಂದ ಯಾವುದೇ ಶುಲ್ಕ ವಸೂಲಿ ಮಾಡದಂತೆ ಭರವಸೆ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇ.ಒ. ಅವರ ಸ್ಪಂದನೆ ಮತ್ತು ವಾದದ ರೀತಿಯಿಂದ ನಮಗೆ ತೀವ್ರ ಅಸಮಾಧಾನವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಜವಾಬ್ದಾರಿಯುತವಾಗಿ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಇ.ಒ. ಅವರು ಈ ಪ್ರಕರಣದ ಕುರಿತು ಸೂಕ್ತ ಕ್ರಮ ಕೈಗೊಂಡು, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಅಲ್ಲದೆ, ಅಧ್ಯಕ್ಷರು ನೀಡಿರುವ ಭರವಸೆಯಂತೆ ಮುಂದಿನ ವರ್ಷದಿಂದ ಶುಲ್ಕ ವಸೂಲಿ ನಡೆಯದಂತೆ ಖಚಿತಪಡಿಸಬೇಕು” ಎಂದು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಬಿವಿಪಿ ಕಡಬ ತಾಲೂಕು ಸಂಚಾಲಕರಾದ ಹಾರ್ದಿಕ್, ಸುಬ್ರಹ್ಮಣ್ಯ ವಿದ್ಯಾರ್ಥಿ ನಾಯಕರಾದ ಹವ್ಯಾಸ್ ಗೌಡ, ಚಿನ್ಮಯ್ ಡಿ.ಎಸ್., ಶ್ರೀಶರಣ್ ಮೊಗ್ರ ಮತ್ತು ಅಮಿತ್ ನಾಯಕ್ ಉಪಸ್ಥಿತರಿದ್ದರು.







