













ಕಲ್ಮಡ್ಕ ಗ್ರಾಮದ ಹೊಳೆಕ್ಕರೆ ಎಂಬಲ್ಲಿ ತೋಡಿನಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ಅಳವಡಿಸಿರುವ ಆರೋಪಕ್ಕೊಳಗಾಗಿರುವ ಇಬ್ಬರಲ್ಲಿ ಒಬ್ಬರನ್ನು ಬೆಳ್ಳಾರೆ ಪೊಲೀಸರು ಅ.19 ರಂದು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಎಣ್ಮೂರು ಗ್ರಾಮದ ಕಲ್ಲೇರಿ ನಿವಾಸಿ ರಮೇಶ ಎಂಬವರು ಬಂಧನಕ್ಕೊಳಗಾದವರು. ಬಂಧಿತ ಆರೋಪಿಯನ್ನು ಪೊಲೀಸರು ಮಂಗಳೂರಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೊಳೆಕ್ಕರೆ ತೋಟದ ಮಾಲೀಕ ಮಧುಸೂದನ್ ಭಟ್ ಎಂಬವರ ತೋಟದಲ್ಲಿ ಅ.12ರಂದು ರಾತ್ರಿ ನಡೆದ ಓಟೆಚ್ಚಾರ್ ತೋಡಿನಲ್ಲಿ ಮೀನು ಹಿಡಿಯಲು ಹೋಗಿದ್ದ ಕಲ್ಮಡ್ಕದ ಭರತ್ (28) ಹಾಗೂ ಅವರ ಭಾವ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಮುಂಗೇಲು ಮನೆ ರಮೇಶ್ ಅಲಿಯಾಸ್ ಗಣೇಶ್ (36) ಹೊಳಕ್ಕರೆ ಮಧುಸೂದನ ಭಟ್ ರವರ ತೋಟದ ಬದಿಯಲ್ಲಿ ಹೊಳೆಗೆ ಇಳಿಬಿಟ್ಟಿದ್ದ ವಿದ್ಯುತ್ ಪ್ರವಹಿಸುವ ತಂತಿ ತಗಲಿ ವಿದ್ಯುದಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಅವರೊಂದಿಗೆ ಇದ್ದ ಬಾಲಕ ಸಿಂಚನ್ ಗಾಯಗೊಂಡಿದ್ದು ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ರಮವಾಗಿ ವಿದ್ಯುತ್ ಸಂಪರ್ಕದ ತಂತಿ ಹೊಳೆಗೆ ಇಳಿಬಿಟ್ಟು ಮೀನು ಹಿಡಿದುಕೊಂಡು ಬರುತ್ತಿದ್ದ ಯುವಕರ ಸಾವಿಗೆ ಕಾರಣರಾಗಿದ್ದಾರೆಂದು ತೋಟದ ಮಾಲಕ ಮಧುಸೂದನ್ ಭಟ್ ರವರ ಮೇಲೆ ಮತ್ತು ಅಕ್ರಮವಾಗಿ ವಿದ್ಯುತ್ ಸಂಪರ್ಕದ ತಂತಿ ಅಳವಡಿಸಲು ಮಧುಸೂದನ ಭಟ್ ರಿಗೆ ನೆರವಾಗಿದ್ದಾರೆಂದು ಕಲ್ಲೇರಿಯ ರಮೇಶ ಎಂಬವರ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆದರೆ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದರು. ಹುಡುಕಾಡುತ್ತಿದ್ದ ಪೋಲೀಸರಿಗೆ ನಿನ್ನೆ ರಮೇಶ ಸಿಕ್ಕಿಬಿದ್ದಿದ್ದಾರೆ. ಮಧುಸೂದನ ಭಟ್ ರ ಮಾಹಿತಿ ದೊರೆತಿಲ್ಲವೆಂದು ಹೇಳಲಾಗುತ್ತಿದೆ.







