ಸುಳ್ಯ :ಬೈಕಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳಿಗೆ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು

0

ಸುಳ್ಯ ಅಂಬಟೆಡ್ಕ ವೆಹಿಕಲ್ ಕಫೆ ಎಂಬ ಗ್ಯಾರೇಜಿನಲ್ಲಿ ಆಗಸ್ಟ್ 26 ರಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ಆರೋಪಿಗಳಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆ. 26 ರಂದು ರಾತ್ರಿ 10:15 ಗಂಟೆಗೆ ಗ್ಯಾರೇಜ್ ಮಾಲಕರು ಗ್ಯಾರೇಜ್ ಬಂದ್ ಮಾಡಿ ಹೋಗಿದ್ದು ರಾತ್ರಿ 11:00 ಗಂಟೆಗೆ ಸ್ಥಳೀಯ ನಿವಾಸಿಗಳು ಕರೆ ಮಾಡಿ ಗ್ಯಾರೇಜಿನಲ್ಲಿದ್ದ ಮೋಟರ್ ಸೈಕಲ್ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ ಎಂದು ಗ್ಯಾರೇಜಿನ ಮಾಲಕರಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಕೂಡಲೇ ಗ್ಯಾರೇಜ್ ಗೆ ಬಂದ ಮಾಲಕ ಸ್ಥಳೀಯ ವ್ಯಕ್ತಿಗಳ ಸಹಕಾರದಿಂದ ಬೆಂಕಿ ನಂದಿಸಿದ್ದು ಆ. 29 ರಂದು ಸುಳ್ಯ ಪೊಲೀಸ್ ಠಾಣೆಗೆ ಬೈಕಿನ ಮಾಲಕರು ದೂರು ನೀಡಿದ್ದರು.

ದೂರಿನ ಮೇರೆಗೆ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಸುಳ್ಯ ಪೊಲೀಸ್ ಉಪನಿರೀಕ್ಷಕ ಉದಯರವಿ ಎಂ.ವೈ. ಯವರು ತನಿಖೆ ಕೈಗೊಂಡಿದ್ದು ಆರೋಪಿಗಳ ಮಾಹಿತಿಯನ್ನು ಕಲೆಹಾಕಿ ಈ ಪ್ರಕರಣದ ಆರೋಪಿಗಳು ಎನ್ನಲಾದ ದಯಾನಂದ ಮತ್ತು ದರ್ಶನ್ ರಾಜು ಎಂಬವರನ್ನು ಸೆಪ್ಟೆಂಬರ್ 30 ರಂದು ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ತದನಂತರ ಆರೋಪಿ ದಯಾನಂದ ಮತ್ತು ದರ್ಶನ್ ರಾಜು ರವರ ಪರವಾಗಿ ಜಾಮೀನಿಗಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿ ಸದರಿ ಜಾಮೀನು ಅರ್ಜಿಯ ಮೇಲೆ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ರವರು ಆರೋಪಿ ದಯಾನಂದ ಮತ್ತು ದರ್ಶನ್ ರಾಜು ರವರುಗಳನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ದಿನಾಂಕ ಅಕ್ಟೋಬರ್ 14 ರಂದು ಆದೇಶವನ್ನು ಮಾಡಿರುತ್ತಾರೆ. ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಶ್ರೀಮತಿ ಚಂಪಾ ವಿ.ಗೌಡ, ರಾಜೇಶ್ ಬಿ.ಜಿ, ಶ್ಯಾಮ್ ಪ್ರಸಾದ್ ಎನ್.ಕೆ. ಹಾಗೂ ವಿಮಲೇಶ್ ಆರ್.ಗೌಡ ರವರು ವಾದಿಸಿದ್ದರು.