ಓರ್ವ ಸವಾರ ಮೃತ್ಯು, ಮತ್ತೊರ್ವ ಗಂಭೀರ














ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಸಂಪರ್ಕ ರಸ್ತೆಯ ಕನ್ನಡಕುಮೇರಿ ಎಂಬಲ್ಲಿ ಅ. 20 ರಂದು ರಾತ್ರಿ ರಸ್ತೆ ಬದಿಯ ವಿದ್ಯುತ್ ಕಂಬದ ಸಪೋರ್ಟ್ ವೈರ್ಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿ ಕಡಬ ತಾಲೂಕಿನ ಕುದ್ಮಾರು ಗ್ರಾಮದ ನಿವಾಸಿ ಧನಂಜಯ ಎಂದು ಗುರುತಿಸಲಾಗಿದೆ.
ಅ.20 ರಂದು ರಾತ್ರಿ ವೇಳೆ ಬೈಕ್ ಕನ್ನಡಕುಮೇರಿ ತಲುಪುತ್ತಿದ್ದಂತೆ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಬೈಕ್ ನೇರವಾಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇ ವೈರ್ಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರ ಧನಂಜಯ ಅವರ ದೇಹ ಹಾಗೂ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಮೃತ ಪಟ್ಟಿದ್ದು ಹಿಂಬದಿ ಸವಾರ ರೋಷನ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ತನಿಖೆ ಮುಂದುವರಿಸಿದ್ದಾರೆ.






