














ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ ಪ್ರಾರಂಭವಾದ ನವರಾತ್ರಿ ಉತ್ಸವವು 21 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆದು ಸಮಾಪ್ತಿಗೊಂಡಿದೆ

ಕಾರ್ಯಕ್ರಮವು ಗಣಪತಿ ಹವನದೊಂದಿಗೆ ಪ್ರಾರಂಭಗೊಂಡು ಶ್ರೀದೇವಿಗೆ ಪ್ರತಿದಿನ ವಿಶೇಷವಾಗಿ ಮಹಾಪೂಜೆ ನಡೆಸಲಾಯಿತು. ಲಲಿತ ಪಂಚಮಿ ದಿವಸದಂದು ಸಾಮೂಹಿಕ ಚಂಡಿಕಾ ಹವನ ಹಾಗೂ ಕುಂಕುಮಾರ್ಚನೆ ನಡೆಸಲಾಯಿತು. ವಿಶೇಷವಾಗಿ ಶ್ರೀದೇವಿಗೆ ಮಹಾಪೂಜೆ ನಡೆಸಿ ಸಂಕ್ರಮಣ ವಿಶೇಷ ಪೂಜೆ, ಶಾರದಾ ಪೂಜೆ ಸಮಯದಲ್ಲಿ ಮಕ್ಕಳಿಗೆ ವಿದ್ಯಾರಂಭ ದುರ್ಗಾಷ್ಟಮಿಯಂದು ಮಹಾಪೂಜೆ ನಡೆಸಲಾಯಿತು. ಮಹಾನವಮಿಯಂದು ರಂಗಪೂಜೆ, ವಾಹನ ಪೂಜೆ ನಡೆಯಿತು. ವಿಜಯದಶಮಿಯಂದು ವಿದ್ಯಾರಂಭ, ಕದಿರು ಪೂಜೆ, ಪ್ರಸಾದ ವಿತರಣೆ, ಶಮಿ ಪೂಜೆ ಹಾಗೂ ನವಾನ್ನ ಭೋಜನದಂದು ಮಕ್ಕಳಿಗೆ ಅನ್ನ ಪ್ರಾಶನ ನಡೆಯಿತು. ಪ್ರತಿದಿನ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ಇಲ್ಲಿನ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಹಾಗೂ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ವಾಹನ ಪೂಜೆ ನಡೆಸಲಾಯಿತು. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ನೃತ್ಯ ಸಾರಂಗ ಕಲಾ ಕುಟೀರ ಗುತ್ತಿಗಾರು ಇಲ್ಲಿನ ಶ್ರೀಮತಿ ರಚಿತಾ ಗೌಡ ಹಾಗೂ ಇವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ಬ್ರಹ್ಮ ಕಲಶೋತ್ಸವ ಸಮಿತಿಯವರು, ಊರಿನ ಹಾಗೂ ಪರವೂರಿನ ಭಕ್ತಾದಿಗಳು ಆಗಮಿಸಿ, ಶ್ರೀದೇವಿಯ ಪ್ರಸಾದವನ್ನು ಸ್ವೀಕರಿಸಿದರು.
(ಚಿತ್ರ ವರದಿ :ಡಿ.ಹೆಚ್.)








