ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದವರಾದ ಡಾ. ಪ್ರಶಾಂತಿ ಶಶಿಕಾಂತ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ‘ಚಾಂಪಿಯನ್ ಆಫ್ ಟೀಚರ್ಸ್ ಎಂಪವರ್ಮೆಂಟ್’ (Champion of Teachers’ Empowerment) ಪ್ರಶಸ್ತಿಗೆ ಭಾಜನರಾಗಿದ್ದಾರೆ.














ಬೆಂಗಳೂರಿನ ಗೋಕುಲಂ ಗ್ರ್ಯಾಂಡ್ನಲ್ಲಿ 2026ರ ಅಕ್ಟೋಬರ್ 24ರಂದು ನಡೆದ ಸಮಾರಂಭದಲ್ಲಿ ಅಶೋಕ ತಂಡದ ವತಿಯಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಖ್ಯಾತ ಶಿಕ್ಷಣ ತಜ್ಞ ಹಾಗೂ ದೂರದೃಷ್ಟಿಯ ನಾಯಕ ಡಾ. ಗುರುರಾಜ ಕರ್ಜಗಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಡಾ. ಪ್ರಶಾಂತಿ ಶಶಿಕಾಂತ್ ಅವರು ಬೆಂಗಳೂರಿನ ಮಾಕಳಿಯ ಬಿ.ಎಂ.ಎನ್. ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಸಿಬಿಎಸ್ಇಯ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕರ ವೃತ್ತಿಪರ ಸಾಮರ್ಥ್ಯ ವೃದ್ಧಿ, ನವೀನ ಬೋಧನಾ ವಿಧಾನಗಳ ಅಳವಡಿಕೆ ಹಾಗೂ ಗುಣಮಟ್ಟದ ಶಿಕ್ಷಣದ ಉತ್ತೇಜನದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಬೋಧನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಯ ವಾತಾವರಣವನ್ನು ನಿರ್ಮಿಸುವುದು ಅವರ ಶೈಕ್ಷಣಿಕ ನಾಯಕತ್ವದ ಪ್ರಮುಖ ಉದ್ದೇಶಗಳಾಗಿವೆ.
ಇವರು ಉಬರಡ್ಕ ಮಿತ್ತೂರಿನ ಶ್ರೀ ರಾಘವ ಬಿ.ಆರ್. ಹಾಗೂ ಶ್ರೀಮತಿ ನಾಗವೇಣಿ ಬಿ.ಆರ್. ದಂಪತಿಯ ಪುತ್ರಿ. ರಾಘವ ಬಿ.ಆರ್. ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಗ್ರಾಮೀಣ ಪರಿಸರದಲ್ಲಿ ಶಿಕ್ಷಣ ಪಡೆದು, ಪರಿಶ್ರಮ, ಬದ್ಧತೆ ಹಾಗೂ ನಿರಂತರ ಸಾಧನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ಪ್ರಶಾಂತಿ ಶಶಿಕಾಂತ್ ಅವರಿಗೆ ದೊರೆತ ಈ ಗೌರವವು ಉಬರಡ್ಕ ಮಿತ್ತೂರು ಹಾಗೂ ಸುಳ್ಯ ಭಾಗದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆ ಸ್ಥಳೀಯ ಯುವಜನತೆಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರೇರಣೆಯಾಗಿದೆ.







