ಮುರುಳ್ಯ : ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ಮುಸ್ಲಿಂ ದಫನಭೂಮಿಗೆ ಕಾದಿರಿಸಲಾಗಿದೆ ಎಂಬುದು ಸುಳ್ಳು ಪ್ರಚಾರ

0

ದಫನಭೂಮಿಗೆ ನೀಡಿರುವ ಸ್ಥಳ ಸರಕಾರಿ ಜಾಗ. ಅದರಲ್ಲಿ ರಕ್ತೇಶ್ವರಿ ಸಾನಿಧ್ಯವಿಲ್ಲ

ಸಮಹಾದಿ ರಿಫಾಯಿ ಜುಮಾ ಮಸ್ಜಿದ್ ಪದಾಧಿಕಾರಿಗಳಿಂದ ಪತ್ರಿಕಾಗೋಷ್ಟಿ

ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಸಮಹಾದಿ ಎಂಬಲ್ಲಿ ಒಂದು ಎಕರೆ ಸರ್ಕಾರಿ ಜಮೀನನ್ನು ಮುಸ್ಲಿಂ ದಫನಭೂಮಿಗಾಗಿ ವಕ್ಫ್ ಇಲಾಖೆಯ ಹೆಸರಿನಲ್ಲಿ ಜಿಲ್ಲಾಧಿಕಾರಿಗಳು ಕಾದಿರಿಸಿದ್ದು, ಅದರಲ್ಲಿ ರಕ್ತೇಶ್ವರಿ ಸಾನಿಧ್ಯವಿದೆ ಎಂಬುದು ಸುಳ್ಳು ಪ್ರಚಾರ ಮಾತ್ರವಲ್ಲದೆ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೃತ್ಯವಾಗಿದೆ” ಎಂದು ಮುರುಳ್ಯ ಸಮಹಾದಿಯ ರಿಫಾಯಿ ಜುಮ್ಮಾ ಮಸೀದಿ ಪದಾಧಿಕಾರಿಗಳು ಹೇಳಿದ್ದಾರೆ.

ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ಮುಸ್ಲಿಂ ದಫನಭೂಮಿಗಾಗಿ ವಕ್ಫ್ ಗೆ ಕಾದಿರಿಸಿರುವುದರ ವಿರುದ್ಧ ಹಿಂದೂ ಹಿತರಕ್ಷಣಾ ವೇದಿಕೆಯವರು ನಾಳೆ ( ಅ.28 ರಂದು ) ಪ್ರತಿಭಟನೆ ನಡೆಸಲು ಕರೆ ನೀಡಿರುವುದರ ಹಿನ್ನೆಲೆಯಲ್ಲಿ ಮುರುಳ್ಯ ಸಮಹಾದಿಯ ಮಸೀದಿ ಪದಾಧಿಕಾರಿಗಳಾದ ಅಧ್ಯಕ್ಷ ಉಮ್ಮರ್ ಫಾರೂಕ್ ರಾಗಿಪೇಟೆ, ಕಾರ್ಯದರ್ಶಿ ಹಸೈನಾರ್ ಸಮಹಾದಿ ರಾಗಿಪೇಟೆ, ಕೋಶಾಧಿಕಾರಿ …..
………, ಉಪಾಧ್ಯಕ್ಷ ಸಾಬುಕುಂಞಿ ಹುದೇರಿ, ಮಾಜಿ ಅಧ್ಯಕ್ಷ ಮಹಮ್ಮದ್ ಅಲೆಕ್ಕಾಡಿ, ಸದಸ್ಯ ಪಿ.ಎಂ.ಅಬ್ದುಲ್ ರಹಿಮಾನ್ ರವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದರು.

ಮುರುಳ್ಯ ಗ್ರಾಮದ ಅಲೆಕ್ಕಾಡಿ, ಕುಕ್ಕಟ್ಟೆ, ಸಮಹಾದಿ,ಪೋಳಾಜೆ, ಹುದೇರಿ, ಮುರುಳ್ಯ ಮೊದಲಾದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸ ಮಾಡುತ್ತಿದ್ದು, ಈ ಗ್ರಾಮದಲ್ಲಿ ಅಲೆಕ್ಕಾಡಿ ಮತ್ತು ಸಮಹಾದಿ ಎಂಬಲ್ಲಿ ಎರಡು ಮಸೀದಿಗಳನ್ನು ಹೊಂದಿರುತ್ತೇವೆ.
ಈ ಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದವರು ಮೃತಪಟ್ಟಾಗ ಮುರುಳ್ಯ ಗ್ರಾಮದ ಸಮಾಧಿ ಎಂಬಲ್ಲಿ ಅಂದರೆ ಈಗ ದಫನ ಭೂಮಿ ಕಾಯ್ದಿರಿಸಿದ ಜಮೀನಿನ ಒಂದು ಭಾಗದಲ್ಲಿ ದಫನ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಸದ್ರಿ ಸ್ಥಳವು ದಫನ ಭೂಮಿಯಾಗಿ ಇಲಾಖೆಯಿಂದ ಮಂಜೂರು ಆಗದೇ ಇದ್ದ ಕಾರಣ ಆ ಸ್ಥಳದಲ್ಲಿ ದಫನ ಮಾಡುವುದು ಸೂಕ್ತವಲ್ಲ ಎಂಬ ಕಾರಣದಿಂದ ಅಲ್ಲಿ ದಫನ ಮಾಡುವುದನ್ನು ನಿಲ್ಲಿಸಿದ್ದೆವು. ನಂತರ ಈ ಗ್ರಾಮದಲ್ಲಿ ಮೃತಪಟ್ಟ ಮುಸ್ಲಿಮ್ ವ್ಯಕ್ತಿಗಳ ಮೃತದೇಹವನ್ನು ದಫನ ಮಾಡಲು ಸುಮಾರು 6-7 ಕಿ.ಲೋ ಮೀಟರ್ ದೂರದ ಕಡಬ ತಾಲ್ಲೂಕಿನ ಬೈತಡ್ಕ ಮಸೀದಿಯ ದಫನ ಭೂಮಿಗೆ ಕೊಂಡೋಗಿ ಅಲ್ಲಿ ದಫನ ಮಾಡುತ್ತಿದ್ದೆವು. ಈಗ ಅಲ್ಲಿ ಕೂಡ ಸ್ಥಳಾವಕಾಶದ ಕೊರತೆ ಇರುವುದರಿಂದ ನಾವು ಹಿಂದೆ ದಫನ ಮಾಡುತ್ತಿದ್ದ ಮುರುಳ್ಯ ಗ್ರಾಮದ ಸರ್ವೆ ನಂ 66/* ಹಾಗೂ 67/3 ರಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದ ಕಾರಣ ದ.ಕ ಜಿಲ್ಲೆ ವಕ್ಫ್ ಇಲಾಖೆಯ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರಕಾರ ಸರ್ವೆ ಕಾರ್ಯ ಮತ್ತು ಕಂದಾಯ ಇಲಾಖೆಯ ಪರಿಶೀಲನೆಗಳು ನಡೆದು ಒಟ್ಟು ಒಂದು ಎಕರೆ ಜಾಗವನ್ನು ಸಾರ್ವಜನಿಕ ಮುಸ್ಲಿಂ ದಫನ ಭೂಮಿಯಾಗಿ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಅದೇಶ ಮಾಡಿರುತ್ತಾರೆ. ಅದರಂತೆ ನಾಳೆ ಅಂದರೆ 28/10/2026 ರಂದು ವಕ್ಫ್ ಇಲಾಖೆಗೆ ಸದರಿ ಜಮೀನನ್ನು ಹಸ್ತಾಂತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸುಳ್ಯ ತಹಶಿಲ್ದಾರರು ಸೂಚಿಸಿ ಆದೇಶಿಸಿರುತ್ತಾರೆ.

ಸಾರ್ವಜನಿಕ ಮುಸ್ಲಿಂ ದಫನ ಭೂಮಿಗೆ ಕಾಯ್ದಿರಿಸಿದ ಜಮೀನು ರಕ್ತೇಶ್ವರಿ ಸಾನಿಧ್ಯವುಳ್ಳ ಕೃಷಿ ಭೂಮಿಯಾಗಿದೆ ಎಂದು ಕೆಲವರು ಸುಳ್ಳು ಮಾಹಿತಿಯನ್ನು ನೀಡಿ ಇದರ ವಿರುದ್ಧ ಹಿಂದೂ ಹಿತರಕ್ಷಣಾ ವೇದಿಕೆಯವರು ಪ್ರತಿಭಟನೆ ಮಾಡಲು ಕರೆ ನೀಡಿದ್ದಾರೆ. ಆದರೆ ವಕ್ಫ್ ಇಲಾಖೆಗೆ ಕಾಯ್ದಿರಿಸಿದ ಜಮೀನಲ್ಲಿ ರಕ್ತೇಶ್ವರಿ ಸಾನಿಧ್ಯ ಇರುವುದಿಲ್ಲ.ಮತ್ತು ಅದು ಕೃಷಿ ಜಮೀನೂ ಆಗಿರುವುದಿಲ್ಲ. ಅದು ಸರಕಾರಿ ಜಮೀನಾಗಿರುತ್ತದೆ. ಇದರ ಅಕ್ಕಪಕ್ಕದಲ್ಲಿ ಕೂಡ ರಕ್ತೇಶ್ವರಿ ಸಾನಿಧ್ಯ ಇರುವುದಿಲ್ಲ ಮತ್ತು ಇಷ್ಟರ ತನಕ ಇಲ್ಲಿ ಯಾವುದೇ ಪೂಜೆ ಪುರಸ್ಕಾರಗಳು ನಡೆದಿರುವುದಿಲ್ಲ. ಮಾತ್ರವಲ್ಲದೆ ದಫನ ಭೂಮಿಗೆ ಕಾಯ್ದಿರಿಸಿದ ಸ್ಥಳಕ್ಕೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿರುವುದಿಲ್ಲ.

ಈಗ ದಫನ ಭೂಮಿಗೆ ಕಾಯ್ದಿರಿಸಿದ ಜಮೀನಿನ ಪಕ್ಕದ ಜಮೀನಿನ ಮಾಲಕರೊಬ್ಬರು ಅದರ ವರ್ಗ ಜಮೀನು ಅಲ್ಲದೇ ಸುಮಾರು 15 ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ಅಕ್ರಮ ಸ್ವಾಧೀನ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ನಾವು ದೂರು ನೀಡಿದ್ದು, ಸದ್ರಿ ಜಮೀನಿನಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡದಂತೆ ತಹಶಿಲ್ದಾರರು ಅಕ್ರಮ ಸ್ವಾಧೀನದಾರರಿಗೆ ಸೂಚನೆ ನೀಡಿದ್ದು ನಮ್ಮ ಅರ್ಜಿಯು ತನಿಖಾ ಹಂತದಲ್ಲಿರುತ್ತದೆ ” ಎಂದ ಕಾರ್ಯದರ್ಶಿ ಹಸೈನಾರ್ ರವರು ” ಮುರುಳ್ಯ ಗ್ರಾಮದಲ್ಲಿ ಎರಡು ಕಡೆ ಹಿಂದೂ ರುದ್ರ ಭೂಮಿ ಇದ್ದು, ಮುಸ್ಲಿಂ ಸಮುದಾಯದವರಿಗೆ ಮಾತ್ರ ಅಂತ್ಯಕ್ರಿಯೆ ನೆರವೇರಿಸಲು ದಫನ ಭೂಮಿ ಇಲ್ಲದೇ ತೊಂದರೆ ಅನುಭವಿಸುತ್ತಿರುವುದರಿಂದ ಮೂಲಭೂತ ಸೌಕರ್ಯವಾದ ದಘನ ಭೂಮಿಯನ್ನು ಮಾತ್ರ ನಾವು ಕೇಳಿರುವುದಾಗಿದೆ. ನ್ಯಾಯಾಲಯ ಹಾಗೂ ಸರಕಾರ ಕೂಡ ದಫನಕ್ಕೆ ಮತ್ತು ದಹನಕ್ಕೆ ಅಗತ್ಯವುಳ್ಳ ಜಮೀನನ್ನು ಪ್ರತೀ ಗ್ರಾಮದಲ್ಲಿಯೂ ಕಾಯ್ದಿರಿಸಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಸಂಬಂಧಿಸಿದವರಿಗೆ ಆದೇಶ ಕೂಡ ನೀಡಿರುತ್ತದೆ ” ಎಂದು ಹೇಳಿದರು.

ನಮ್ಮ ಶಾಸಕರು ಮುರುಳ್ಯ ಗ್ರಾಮದವರೇ ಆಗಿರುವುದರಿಂದ ನಮ್ಮ ಗ್ರಾಮದಲ್ಲಿ ದಫನ ಭೂಮಿ ಇಲ್ಲದೆ ಆಗುತ್ತಿರುವ ತೊಂದರೆಗಳನ್ನು ಅವರ ಮನೆಗೆ ಹೋಗಿ ವಿವರಿಸಿರುತ್ತೇವೆ. ಈಗ ದಫನ ಭೂಮಿಯಾಗಿ ಕಾಯ್ದಿರಿಸಿದ ಸರ್ಕಾರಿ ಜಮೀನಿನಲ್ಲಿ ಬೇರೆ ಯಾರಿಗಾದರೂ ಯಾವುದೇ ರೀತಿಯ ಹಕ್ಕುಗಳು ಇರುತ್ತಿದ್ದರೆ ಅವರು ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಕಾನೂನು ಪ್ರಕಾರ ದಫನ ಭೂಮಿಯನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಅದನ್ನು ಬಿಟ್ಟು ಹಿಂದೂ ಹಿತರಕ್ಷಣಾ ವೇದಿಕೆಯವರಿಗೆ ಈ ಜಮೀನಿನಲ್ಲಿ ರಸ್ತೇಶ್ವರಿಯ ಸಾನಿಧ್ಯ ಇದೆಯೆಂದು ಸುಳ್ಳು ಮಾಹಿತಿ ನೀಡಿ ಪ್ರತಿಭಟನೆ ನಡೆಸಿ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ.‌ ದಫನ ಭೂಮಿಯ ಜಮೀನಿನಲ್ಲಿ ರಕ್ಷೇಶ್ವರಿ ಸಾನಿಧ್ಯ ಇದೆ ಎಂದು ಕೆಲವರು ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿ ಊರಿನಲ್ಲಿ ಸಾಮರಸ್ಯ ಹಾಳು ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಪದಾಧಿಕಾರಿಗಳು ಹೇಳಿದರು.
” ಹಿಂದೆ ನಮಗೆ ತಿಳಿಯದೆಯೇ ಕುಕ್ಕಟ್ಟೆ ಸಮೀಪ 22 ಸೆಂಟ್ಸ್ ಭೂಮಿಯನ್ನು ನಮ್ಮ ದಫನ ಭೂಮಿಗೆಂದು ಕಾದಿರಿಸಲಾಗಿತ್ತು. ಆದರೆ ಈ ವಿಚಾರ ನಮಗೆ ತಿಳಿದೇ ಇರಲಿಲ್ಲ. ನಮಗೆ ತಿಳಿದ ಬಳಿಕ ನಾವು ಸ್ಥಳಕ್ಕೆ ಹೋಗಿ ನೋಡುವಾಗ ಆ ಜಾಗದಲ್ಲಿ ಹಿಂದೂ ಬಾಂಧವರೊಬ್ಬರ ಮನೆ ಮತ್ತು ಕೃಷಿ ಇದೆ. ಕುಕ್ಕಟ್ಟೆ ದೇವಸ್ಥಾನ ಕೂಡ ಅದರ ಸಮೀಪವೇ ಇದೆ. ನಮ್ಮ ಮಸೀದಿಗಿಂತ ದೂರವೂ ಆಗುತ್ತದೆ. ಅದಕ್ಕಾಗಿ ನಾವು ಆ ಜಾಗ ಬೇಡವೆಂದು ಕಂದಾಯ ಇಲಾಖೆಗೆ ತಿಳಿಸಿದ್ದೇವೆ. ಆ ಬಳಿಕ ನಮ್ಮ ಮಸೀದಿಯ ಪಕ್ಕದಲ್ಲೇ ಇರುವ ಹಿಂದೆ ನಾವು ದಫನ ಕಾರ್ಯ ನಡೆಸುತ್ತಿದ್ದ ಸರಕಾರಿ ಜಾಗ ಕೇಳಿದ್ದೆವು ” ಎಂದು ಅವರುಗಳು ಹೇಳಿದರು.