ಬೆಳ್ಲಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನು ಜೂ. 23ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಕಬಡ್ಡಿ ಕೋಚ್ ಮಾಧವ ಬಿ ಕೆ ಹಸಿರು ನಿಶಾನೆಯನ್ನು ಹಾರಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಸಂಕೇತವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು ಜ್ಞಾನ ಗಂಗಾ ಸಂಸ್ಥೆಯಿಂದ ಬೆಳ್ಳಾರೆ ಮಾಸ್ತಿಕಟ್ಟೆಯ ತನಕ ಫನ್ ರನ್(ಓಟ) ನೀಡಿ ಜಾಗ್ರತಿ ಮೂಡಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಕ್ರೀಡೆ ಪ್ರತಿಯೊಬ್ಬನ ಜೀವನದ ಅವಿಭಾಜ್ಯ ಅಂಗ. ಕ್ರೀಡೆಗೆ ಶಿಸ್ತುಬದ್ಧ ಜೀವನ ಮುಖ್ಯ. ಉತ್ತಮ ಹವ್ಯಾಸಗಳು, ಧನಾತ್ಮಕ ಚಿಂತನೆ ಇದ್ದಾಗ ಅತ್ಯುತ್ತಮ ಪ್ರಜೆಯಾಗುವುದು ಸಾಧ್ಯ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಹಾಗೂ ಸಮಯ ಪಾಲನೆ ಗುರಿಮುಟ್ಟುವುದಕ್ಕೆ ಬೇಕಾದ ಅವಶ್ಯಕ ಗುಣಗಳು ಎಂದು ನುಡಿದರು. ಮಕ್ಕಳಿಗೆ NDA ಪರೀಕ್ಷೆ ಹಾಗೂ ಇತರ ಕ್ರೀಡಾ ಅವಲಂಬಿತ ಪರೀಕ್ಷೆಗಳ ಪ್ರವೇಶಕ್ಕೆ ಅವಶ್ಯವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಎಂ.ಪಿ ಉಮೇಶ್, ಶಾಲಾ ಪ್ರಾಂಶುಪಾಲರಾದ ದೇಚಮ್ಮ ಟಿ.ಎಂ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪ್ರಕಾಶ್ ಕುಡೆಕಲ್ಲು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ಕೃತಿ ವಂದನಾರ್ಪಣೆಗೈದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಸತ್ಪ್ರಯೋಜನವನ್ನು ಪಡೆದುಕೊಂಡರು.