ಉಬರಡ್ಕ ಮಿತ್ತೂರಿನಲ್ಲಿ ವಿಜೃಂಭಿಸಿದ ಯಕ್ಷ ದಶ ಸಂಭ್ರಮ

0

ವಿಶೇಷ ರಂಗಪೂಜೆ; ಭಾಗೀರಥಿ ಮುರುಳ್ಯ, ಇಂದಿರಾ ಟೀಚರ್ ಗೆ ಸನ್ಮಾನ

ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘ ಹಾಗೂ ದುಗಲಡ್ಕ ಶ್ರೀ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘದ ಜಂಟಿ ಆಶ್ರಯದಲ್ಲಿ ವಿಶೇಷ ರಂಗಪೂಜೆ, ಯಕ್ಷ ದಶ ಸಂಭ್ರಮ ಹಾಗೂ ಸನ್ಮಾನ ಸಮಾರಂಭವು ನಿನ್ನೆ ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ನಡೆಯಿತು.

ಯಕ್ಷ ಗುರು ಬಾಲಕೃಷ್ಣ ನಾಯರ್ ನೀರಬಿದಿರೆಯವರು ಉಬರಡ್ಕ ದಲ್ಲಿ ಮಕ್ಕಳಿಗೆ ಉಚಿತ ಯಕ್ಷಗಾನ ನಾಟ್ಯ ತರಗತಿ ಆರಂಭಿಸಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ದಶ ಸಂಭ್ರಮ ಕಾರ್ಯಕ್ರಮ ನಡೆಯಿತು.

ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷ ದಶ ಸಂಭ್ರಮದ ಕಾರ್ಯಾಧ್ಯಕ್ಷ ಹರೀಶ್ ರೈ ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು. ಉಬರಡ್ಕ ಮಿತ್ತೂರು ನರಸಿಂಹ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ರತ್ನಾಕರ ಗೌಡ ಬಳ್ಳಡ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡಿ ಮಕ್ಕಳಿಗೆ ಯಕ್ಷಗಾನ ತರಬೇತಿಯ ಮೂಲಕ ಯಕ್ಷಗಾನ ಉಳಿಸಿ ಬೆಳೆಸುವ ಕಾರ್ಯ ಅಭಿನಂದನೀಯ. ಇಂತಹ ನಿಸ್ವಾರ್ಥ ಮನಸ್ಸುಗಳು ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಬೇಕು ಎಂದರು.

ಯಕ್ಷಗಾನ ತರಗತಿಗೆ ಪ್ರೇರಣೆ ನೀಡಿದ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಕೆ.ಕೆ. ಅವರನ್ನು ಸನ್ಮಾನಿಸಲಾಯಿತು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಅಭಿನಂದನಾ ಭಾಷಣಗೈದು ಇಂದಿರಾ ಟೀಚರ್ ಹಾಗೂ ಬಾಲಕೃಷ್ಣ ನಾಯರ್ ಅವರ ಕಾರಣದಿಂದ ಉಬರಡ್ಕದಿಂದ ಆರಂಭಗೊಂಡ ಯಕ್ಷ ಕ್ರಾಂತಿ ಪರಿಸರದ ಅನೇಕ ಊರುಗಳನ್ನು ವ್ಯಾಪಿಸಿ ಮಕ್ಕಳು ಕಲಾವಿದರಾಗಿ ರೂಪುಗೊಂಡಿದ್ದಾರೆ ಎಂದರು.

ದುಗಲಡ್ಕ ದುಗ್ಗಲಾಯ ದೈವಸ್ಥಾನದ ದಯಾನಂದ ಸಾಲ್ಯಾನ್, ಉಬರಡ್ಕ ಮಿತ್ತೂರು ನರಸಿಂಹ ಶಾಸ್ತಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಶಾರದಾ ಡಿ. ಶೆಟ್ಟಿ, ಸಾರ್ವಜನಿಕ ದೇವತಾರಾಧನಾ ಸಮಿತಿ ಅಧ್ಯಕ್ಷ ಶಶಿಧರ ನಾಯರ್, ಯಕ್ಷೋತ್ಸವದ ನಿಕಟ ಪೂರ್ವಾಧ್ಯಕ್ಷ ರಾಘವ ರಾವ್, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಯು., ಉಬರಡ್ಕ ಮಿತ್ತೂರು ಯುವಕ ಮಂಡಲದ ಅಧ್ಯಕ್ಷ ದೇವಪ್ಪ ಆಚಾರ್ಯ, ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಕಾಡುತೋಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಜನಾರ್ದನ, ನಂದಿನಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ನಳಿನಿ ಕೈಪೆ ವಿಶೇಷ ಆಹ್ವಾನಿತರಾಗಿದ್ದರು.

ದುಗ್ಗಲಡ್ಕದ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘದ ಅಧ್ಯಕ್ಷ ಯತೀಶ್ ರೈ ಸ್ವಾಗತಿಸಿದರು. ನಾಟ್ಯ ಗುರು ಬಾಲಕೃಷ್ಣ ನಾಯರ್ ನೀರಬಿದಿರೆ ಪ್ರಸ್ತಾವನೆಗೈದರು.


ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶೈಲಜಾ ನೀರಬಿದಿರೆ ವಂದಿಸಿದರು.

ಮಕ್ಕಳ ಯಕ್ಷ ಕಲಾ ಸಂಘಕ್ಕೆ ಮದ್ದಳೆ ಕೊಡುಗೆ

ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಇಂದಿರಾ ಕೆ.ಕೆ. ಅವರು ಮಕ್ಕಳ ಯಕ್ಷ ಕಲಾ ಸಂಘಕ್ಕೆ ಮದ್ದಳೆಯನ್ನು ಕೊಡುಗೆಯಾಗಿ ನೀಡಿದರು.

  • ಯಕ್ಷ ದಶ ಸಂಭ್ರಮದ ಪ್ರಯುಕ್ತ ಸಭಾ ಕಾರ್ಯಕ್ರಮದ ಮೊದಲು ಕಂಸವಧೆ ಯಕ್ಷಗಾನ ಪ್ರದರ್ಶನಗೊಂಡಿತು. ಆ ಬಳಿಕ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ ನಡೆಯಿತು.
  • ಸಭಾ ಕಾರ್ಯಕ್ರಮದ ಬಳಿಕ ವೀರ ಅಭಿಮನ್ಯು ಮತ್ತು ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.