ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಸುಳ್ಯ ಪೊಲೀಸ್ ಠಾಣಾ ವತಿಯಿಂದ ಸುಳ್ಯ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಜೂನ್ 26ರಂದು ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಈರಯ್ಯ ದುಂತೂರು ಮಾದಕ ವಸ್ತುಗಳ ದುರುಪಯೋಗ ಬಗ್ಗೆ ಮಾತನಾಡಿ ಜಾಗೃತಿ ಕಾರ್ಯಗಾರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಮಾದಕ ವಸ್ತುಗಳ ಚಟ ಜೀವನದಲ್ಲಿ ಒಮ್ಮೆ ಬಂದರೆ ಅದರಿಂದ ರಕ್ಷಣೆ ಪಡೆದುಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಅಮಲು ಪದಾರ್ಥಗಳನ್ನು ಸೇವಿಸುವುದು, ಮಾದಕ ವಸ್ತುಗಳ ಬಳಕೆ ನಮ್ಮ ಜೀವನವನ್ನು ನಾಶ ಮಾಡುತ್ತದೆ. ವಿದ್ಯಾರ್ಥಿಗಳು ಉತ್ತಮ ಕಲಿಕೆಯ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವವರಾಗಿದ್ದಾರೆ. ಆದ್ದರಿಂದ ಯಾವುದೇ ಮಾದಕ ವ್ಯಸನಗಳ ಚಟಕ್ಕೆ ಬಲಿಯಾಗದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್,ಪ್ರಾದ್ಯಾಪಕಿ ಪ್ರೊ. ರತ್ನಾವತಿ ಉಪಸ್ಥಿತರಿದ್ದರು.