ಬಿಜೆಪಿ ಬಂಡಾಯ ಸದಸ್ಯೆ ಶ್ರೀಮತಿ ಸಂಧ್ಯಾ ವಾಗ್ಲೆ ನಾಮಪತ್ರ ಹಿಂತೆಗೆತ ಹಿನ್ನೆಲೆ – ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವಿರೋಧ ಆಯ್ಕೆ
ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಉಪಾಧ್ಯಕ್ಷರಾಗಿ ಆಯ್ಕೆ
ಜಾಲ್ಸೂರು ಗ್ರಾಮ ಪಂಚಾಯತಿಯ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ನಡೆದ ನೂತನ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಬೆಂಬಲಿತರಲ್ಲಿ ಮೀಸಲಾತಿಯಲ್ಲಿ ಆಯ್ಕೆಯಾದ ಸದಸ್ಯರಿಲ್ಲದ ಕಾರಣದಿಂದಾಗಿ ಬಿಜೆಪಿ ಬೆಂಬಲಿತರು ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀಮತಿ ಗೀತಾ ಗೋಪಿನಾಥ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಾಗ ಬಿಜೆಪಿ ಬೆಂಬಲಿತ ಹನ್ನೊಂದು ಮಂದಿ ಸದಸ್ಯರೂ ಭಾಗವಹಿಸದೇ ತಟಸ್ಥರಾಗಿದ್ದರು. ಈ ನಡುವೆ ಬಿಜೆಪಿ ಬಂಡಾಯ ಸದಸ್ಯರಾದ ವಿಜಯ ಅಡ್ಕಾರು ಅವರು ಚುನಾವಣಾ ಪ್ರಕ್ರಿಯೆಗೆ ಬಾರದೇ ಇದ್ದುದರಿಂದ ಐದು ಮಂದಿ ಸದಸ್ಯರು ಮಾತ್ರ ಮತ ಚಲಾವಣೆ ಮಾಡಿದ್ದರು. ಅಂತಿಮವಾಗಿ ಫಲಿತಾಂಶ ಘೋಷಣೆಯಾದಾಗ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರು ನಾಲ್ಕು ಮತಗಳನ್ನು ಹಾಗೂ ಬಿಜೆಪಿ ಬಂಡಾಯ ಸದಸ್ಯೆ ಶ್ರೀಮತಿ ಗೀತಾ ಗೋಪಿನಾಥ್ ಕೇವಲ ಒಂದು ಮತಗಳನ್ನು ಪಡೆದು ಪರಾಭವಗೊಂಡರೆ , ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರು ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಒಟ್ಟು 17 ಮಂದಿ ಸದಸ್ಯ ಬಲದ ಗ್ರಾಮ ಪಂಚಾಯತಿ ಆಡಳಿತದಲ್ಲಿ ಹಿಂದುಳಿದ ವರ್ಗ ಎ ಮಹಿಳಾ ಸ್ಥಾನವು ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಶ್ರೀಮತಿ ತಿರುಮಲೇಶ್ವರಿ ಮರಸಂಕ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶ್ರೀಮತಿ ಸಂಧ್ಯಾ ವಾಗ್ಲೆ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಡೆದ ಬೆಳವಣಿಗೆಯಲ್ಲಿ ಶ್ರೀಮತಿ ಸಂಧ್ಯಾ ವಾಗ್ಲೆ ಅವರು ಅಧ್ಯಕ್ಷತೆಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡದ್ದರಿಂದಾಗಿ
ಬಿಜೆಪಿ ಪಕ್ಷದ ತೀರ್ಮಾನದಂತೆ ಪಕ್ಷದ ಬೆಂಬಲಿತ ಸದಸ್ಯೆಯಾಗಿರುವ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಮುಂದಿನ ಒಂದೂಕಾಲು ವರ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಒಂದೂಕಾಲು ವರ್ಷವಾದ ಬಳಿಕ ಬಿಜೆಪಿ ಪಕ್ಷದ ತೀರ್ಮಾನದ ಸದಸ್ಯರು ಮುಂದಿನ ಒಂದೂಕಾಲು ವರ್ಷದ ಅವಧಿಗೆ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದಿನ ಎರಡೂವರೆ ವರ್ಷಗಳ ಅವಧಿಗೆ ಪರಿಶಿಷ್ಟ ಜಾತಿ ಸ್ಥಾನದಿಂದ ಆಯ್ಕೆಯಾದ ಕೆ.ಎಂ. ಬಾಬು ಕದಿಕಡ್ಕ ಅವರು ಅಧ್ಯಕ್ಷರಾಗಿ ಹಾಗೂ ಹಿಂದುಳಿದ ವರ್ಗ ಎ ಸ್ಥಾನದಿಂದ ಆಯ್ಕೆಯಾದ ಶ್ರೀಮತಿ ಲೀಲಾವತಿ ವಿನೋಬನಗರ ಅವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.