ಗ್ರಾ.ಪಂ. ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಕೆಗೆ ಡೆಪಾಸಿಟ್ ಪಡೆಯಲು ನಿರ್ಧಾರ

0

ಮಂಡೆಕೋಲು‌ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸುವವರು ಪಂಚಾಯತ್ ನಲ್ಲಿ ಡೆಪಾಸಿಟ್ ಪಾವತಿಸುವಂತೆ ಹಾಗೂ ನಿಗದಿತ ಸಮಯಕ್ಕೆ‌ ಬ್ಯಾನರ್ ತೆರವು‌ ಮಾಡದಿದ್ದರೆ ಪಂಚಾಯತ್ ವತಿಯಿಂದ ತೆರವುಗೊಳಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಅನಿಲ್ ತೋಟಪ್ಪಾಡಿ, ಪ್ರಶಾಂತಿ, ಉಷಾ ಗಂಗಾಧರ್, ಗೀತಾ ಎಂ.ಎಸ್., ಶಶಿಕಲಾ ಕುಂಟಿಕಾನ, ರಾಧಿಕ‌ ಮೈತಡ್ಕ, ತಿಲಕ ಕುತ್ಯಾಡಿ, ದಿವ್ಯಲತಾ ಚೌಟಾಜೆ, ತಾರನಾಥ , ದಿನೇಶ್ ಅಕ್ಕಪ್ಪಾಡಿ ಇದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಿಡಿಒ ರಮೇಶ್ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳ ಬ್ಯಾನರ್ ಅಳವಡಿಸುತ್ತಾರೆ. ಆದರೆ ತೆರವು ಮಾಡುವುದರಲ್ಲಿ‌ ವಿಳಂಬ ಆಗುತಿದೆ. ಇತ್ತೀಚೆಗೆ ಆಕ್ಷೇಪಗಳು‌ ಬಂದಿತ್ತು. ಈ ಕುರಿತು‌ ಸಭೆಯಲ್ಲಿ ಸೂಕ್ತ ನಿರ್ಣಯ ಕೈ ಗೊಳ್ಳಬೇಕು ಎಂದು ಹೇಳಿದರು. ಈ ವೇಳೆ ಸದಸ್ಯ ಬಾಲಚಂದ್ರ ದೇವರಗುಂಡರು ಈ ಹಿಂದೆ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಿದರೆ ನಿಗದಿತ ದಿನದಲ್ಲಿ ಹಾಕಿದವರೇ ತೆಗೆಯಬೇಕೆಂಬ ನಿಯಮ ಇತ್ತು. ಅದನ್ನೆ ಮುಂದುವರಿಸೋಣ ಎಂದು ಸಲಹೆ ನೀಡಿದರು.

ಈ ಕುರಿತು ಸಾಧಕ ಬಾಧಕಗಳ ಚರ್ಚೆ ನಡೆಯಿತು. ಬಳಿಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರೇ ಬ್ಯಾನರ್ ಅಳವಡಿಸಿದರೆ ಪಂಚಾಯತ್ ನಿಂದ ಅನುಮತಿ ಪಡೆಯಬೇಕು. ಮತ್ತು ರೂ. 500 ಡೆಪಾಸಿಟ್ ಇರಿಸಬೇಕು. ನಿಗದಿತ ದಿನದೊಳಗೆ ಬ್ಯಾನರ್ ಅಳವಡಿಸಿದವರೇ ತೆರವು ಮಾಡಿ ಪಂಚಾಯತ್ ಗೆ ವರದಿ ಮಾಡಿ, ಆರಂಭದಲ್ಲಿ ಇರಿಸಿದ ಡೆಪಾಸಿಟ್ ಹಣವನ್ನು ಅವರು ಪಡೆದುಕೊಳ್ಳಬೇಕು. ಬ್ಯಾನರ್ ಅಳವಡಿಸಿದವರು ತೆರವು ಮಾಡದಿದ್ದರೆ ಪಂಚಾಯತ್ ತೆರವುಗೊಳಿಸಿ ಅದರ ಖರ್ಚಿನ ಬಾಬ್ತು ಆಗಿ ಡೆಪಾಸಿಟ್ ಹಣವನ್ನು ಪಂಚಾಯತ್ ಬಳಸಿಕೊಳ್ಳುತ್ತದೆ ಎಂದು‌ ನಿರ್ಣಯ ಕೈಗೊಳ್ಳಲಾಯಿತು.

ಮಾವಂಜಿ ಭಾಗದವರು ರಸ್ತೆ ಅಭಿವೃದ್ಧಿ ಆಗದಿರುವ ಬರೆದುಕೊಂಡ ಅರ್ಜಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಏಲಂ ಮುಂದೂಡಿಕೆ : ಮಂಡೆಕೋಲಿನ ಮೀನು ಮಾರುಕಟ್ಟೆ ಅವಧಿ ಮುಗಿದುದರಿಂದ ಮರು ಏಲಂಗೆ ದಿನ ನಿಗದಿ ಮಾಡಲಾಗಿತ್ತು. ಏಲಂ ಕರೆಯಲು ಮೂರು ಮಂದಿ ಇಎಂ ಡಿ ಪಾವತಿಸಿದ್ದರು. ಆದರೆ ಇಎಂಡಿ ಕಟ್ಟಿದ ಮೂವರು ಕೂಡಾ ಮೀನು ಮಾರುಕಟ್ಟೆ ಏಲಂ ಕೂಗಲಿಲ್ಲ.‌ ಏಲಂ ನ ಸಮಯ ಆದುದರಿಂದ ಏಲಂ ನ್ನು ಮುಂದೂಡಲಾಯಿತು.