ನಾಳೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅರ್ಧ ಏಕಾಹ ಭಜನೆ
ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದಲ್ಲಿ 30ನೇ ವರ್ಷದ ಅರ್ಧ ಏಕಾಹ ಭಜನೆಯ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಕ್ಕಳ ಯಕ್ಷಗಾನ ಪ್ರದರ್ಶನವು ಮಾ.3ರಂದು ನಡೆಯಿತು.
ಬೆಳಿಗ್ಗೆ ಗಣಹೋಮ, ಬಳಿಕ ಸಾರ್ವಜನಿಕ ಶ್ರೀಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿತು.

ಅಪರಾಹ್ನ ಭಜನಾ ಮಂದಿರದಿಂದ ಸೋಣಂಗೇರಿ ಸರ್ಕಲ್ ತನಕ ಶ್ರೀ ಮಹಾವಿಷ್ಣು ಕುಣಿತ ಭಜನಾ ತಂಡ ಮತ್ತು ಶ್ರೀ ಬಾಲಮುರುಗನ್ ಕುಣಿತ ಭಜನಾ ತಂಡದಿಂದ ಮೆರವಣಿಗೆಯು ಸಾಗಿ ಬಂದಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ರುಕ್ಮಯ್ಯಗೌಡ ಎಸ್.ಎನ್. ಸೋನಮನೆ ,ಹಾಗೂ ಹಿರಿಯ ಭಜಕರಾದ ಐತಪ್ಪ ನಾಯ್ಕ ಕುಕ್ಕಾಜೆಕಾನ, ಸಮಾಜ ಸೇವಕ ಶೇಷಪ್ಪ ಪೂಜಾರಿ ಸೋಣಂಗೇರಿ ಅವರನ್ನು ಭಜನಾ ಮಂದಿರದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೋಣಂಗೇರಿ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಬಾಲಕೃಷ್ಣ ನಾಯರ್ ನೀರಬಿದಿರೆ ನಿರ್ದೇಶನದ ಶ್ರೀ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘದ ವತಿಯಿಂದ “ಶ್ರೀಕೃಷ್ಣಲೀಲೆ ಕಂಸವಧೆ” ಯಕ್ಷಗಾನ ನಡೆಯಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ರುಕ್ಮಯ್ಯ ಗೌಡ ಸುತ್ತುಕೋಟೆ, ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ,
ಉಪಾಧ್ಯಕ್ಷೆ ಹರಿಣಾಕ್ಷಿ, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಖಜಾಂಜಿ ಲೀಲಾವತಿ ನಡುಮನೆ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನಾಳೆ ಬೆಳಿಗ್ಗೆ ಸೂರ್ಯೋದಯಕ್ಕೆ ದೀಪ ಪ್ರತಿಷ್ಠೆಯಾಗಿ ಅರ್ಧ ಏಕಾಹ ಭಜನೆಯು ಪ್ರಾರಂಭಗೊಳ್ಳಲಿದ್ದು, ಸಂಜೆ ಸೂರ್ಯಾಸ್ತದ ಬಳಿಕ ದೀಪ ವಿಸರ್ಜನೆಯೊಂದಿಗೆ ಸಂಪನ್ನಗೊಳ್ಳಲಿದೆ.