ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಹೊರಡಿಸಲಾದ ಆದೇಶಕ್ಕೆ ಸರಕಾರವೇ ತಾತ್ಕಾಲಿಕವಾಗಿ ತಡೆ ನೀಡಿ ಮತ್ತೊಂದು ಆದೇಶ ಹೊರಡಿಸಿದೆ.
ಎ ಗ್ರೇಡ್ ದೇವಸ್ಥಾನವಾಗಿರುವ ಪಂಜ ದೇಗುಲಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರು ಮತ್ತು ಇತರರನ್ನು ಸದಸ್ಯರಾಗಿ ನೇಮಿಸಿ ಎರಡು ದಿನಗಳ ಹಿಂದಷ್ಟೇ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದರು. ಆದೇಶ ಬಂದ ತಕ್ಷಣ ವ್ಯವಸ್ಥಾಪನಾ ಸಮಿತಿ ಸದಸ್ಯರು ಸಭೆ ಸೇರಿ ದೇವಿಪ್ರಸಾದ್ ಕಾನತ್ತೂರು ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪದಗ್ರಹಣವೂ ನಡೆದಿತ್ತು.
ಇದೀಗ ಆಯುಕ್ತರೇ ಇನ್ನೊಂದು ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಪಣಂಬೂರು ನಂದನೇಶ್ವರ ದೇವಾಲಯ ಹಾಗೂ ಕೊಕ್ಕಡ ವೈದ್ಯನಾಥೇಶ್ವರ ದೇವಾಲಯದ ಸಮಿತಿಯ ರಚಿಸಿ ಹೊರಡಿಸಲಾದ ಆದೇಶಗಳನ್ನು ಧಾರ್ಮಿಕ ದತ್ತಿ ಇಲಾಖಾ ಸಚಿವರ ಸೂಚನೆಯಂತೆ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನೂತನ ವ್ಯವಸ್ಥಾಪನಾ ಸಮಿತಿ ಈಗಾಗಲೇ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ತಡೆಯಾಜ್ಞೆ ಆದೇಶ ಜಾರಿಗೆ ಬರುವುದೋ ಅಥವಾ ಇದೇ ಕಮಿಟಿ ಮುಂದುವರಿಯುವುದೋ ಕಾದುನೋಡಬೇಕಾಗಿದೆ.