ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸ್ಥಾಯಿ ವ್ಯವಸ್ಥೆ
ಕಾಂಞಂಗಾಡ್ ಕಾಣಿಯೂರು ರೈಲ್ವೇ ಮಾರ್ಗ ಸಹಿತ ರೈಲ್ವೇ ಯೋಜನೆಗಳ ಅಧ್ಯಯನ
ಸುದ್ದಿ ಸಂದರ್ಶನದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ
ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ನನ್ನ ಧ್ಯೇಯ. ಲೋಕಸಭಾ ಸದಸ್ಯನಾಗಿ ಆಯ್ಕೆಗೊಂಡು ದೂರದೃಷ್ಟಿಯ ಯೋಚನೆಯೊಂದಿಗೆ ಕೆಲಸ ಮಾಡುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಇಂದು ಸುಳ್ಯ ವಿಧಾನ ಸಭಾ ಕ್ಷೇತ್ರ ಭೇಟಿ ಅಭಿಯಾನ ನಡೆಸುತ್ತಿರುವ ಅವರು ಈ ವೇಳೆ ಸುದ್ದಿಗೆ ವಿಶೇಷ ಸಂದರ್ಶನ ನೀಡಿದರು.
ವಿಶ್ವದಲ್ಲೇ ಅತೀ ದೊಡ್ಡ ಪಕ್ಷವೊಂದರ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ. ಇದೊಂದು ಹೆಮ್ಮೆ ಮತ್ತು ಸಂಭ್ರಮದ ಕ್ಷಣ. ಅದಕ್ಕಾಗಿ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ನಾವೆಲ್ಲಾ ಮುಂದಡಿ ಇಟ್ಟಿದ್ದೇವೆ ಎಂದು ಬ್ರಿಜೇಶ್ ಚೌಟ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಸಮೃದ್ಧಶೀಲವಾದ ಜಿಲ್ಲೆ. ದೂರದೃಷ್ಟಿಯೊಂದಿಗೆ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರ ಸಂಘಟನಾತ್ಮಕವಾಗಿ ಇಡೀ ಜಿಲ್ಲೆಗೆ ಪ್ರೇರಣೆ ನೀಡಿದಂತಹ ಕ್ಷೇತ್ರ. ಈ ಕ್ಷೇತ್ರದ ಅಭಿವೃದ್ಧಿಗೂ ಶಾಸಕರೊಂದಿಗೆ ಚರ್ಚಿಸಿ ಕಾರ್ಯಯೋಜನೆ ಹಾಕಿಕೊಳ್ಳಲಾಗುವುದು ಎಂದು ಹೇಳಿದರು. ಇಲ್ಲಿನ ಕೃಷಿಕರ ಸಮಸ್ಯೆಯ ಬಗ್ಗೆ ಅರಿವಿದೆ. ಅಡಿಕೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಮಾಡಬೇಕಿದೆ. ಪೂರ್ಣ ಪ್ರಮಾಣದಲ್ಲಿ ಸಂಶೋಧನಾ ಕೇಂದ್ರ ತೆರೆದು ಸ್ಥಾಯಿ ವ್ಯವಸ್ಥೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾಣಿಯೂರು- ಕಾಂಞಂಗಾಡ್ ರೈಲ್ವೇ ಹಳಿ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಭಾಗದ ರೈಲ್ವೇ ಯೋಜನೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಾಗಿದೆ. ಈ ಮಾರ್ಗವೂ ಸೇರಿದಂತೆ ಹಲವು ಹೊಸ ಯೋಜನೆಗಳ ರಾಷ್ಟ್ರೀಯ ಪ್ರೊಜೆಕ್ಟ್ ತಯಾರಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಲಾಗುವುದು ಬೆಂಗಳೂರು- ಮಂಗಳೂರು ಹೈಸ್ಪೀಡ್ ರೈಲ್ವೇ ನೆಟ್‌ವರ್ಕ್ ಆಗಬೇಕಿದೆ. ಭೌಗೋಳಿಕ ಮತ್ತು ಕಾನೂನು ಸವಾಲುಗಳನ್ನು ಎದುರಿಸುತ್ತಲೇ ಈ ಯೋಜನೆಗಳು ಅಸ್ತಿತ್ವಕ್ಕೆ ಬರಬೇಕಾಗಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಲಾಗುವುದು ಎಂದು ಬಿಜೇಶ್ ಚೌಟ ಹೇಳಿದರು.