ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ ಹಿನ್ನೆಲೆ
ಸ್ಥಳೀಯರ ಸಹಕಾರದೊಂದಿಗೆ ಪಟಾಕಿ ಸಿಡಿಸಿ ಆನೆಗಳನ್ನು ಬೆನ್ನಟ್ಟಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು
ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ದಾಳಿ ನಡೆಸಿ, ಭತ್ತಕೃಷಿ ಹಾಗೂ ಬಾಳೆಕೃಷಿ ಹಾನಿ ಮಾಡಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಕಾಡಾನೆಗಳ ಹಿಂಡನ್ನು ಬೆನ್ನಟ್ಟಿದ ಘಟನೆ ಕೊಡಗು ಸಂಪಾಜೆ ಗ್ರಾಮದ ಶಿರಾಡಿ ದೈವಸ್ಥಾನದ ಸಮೀಪ ನ.22ರಂದು ರಾತ್ರಿ ಸಂಭವಿಸಿದೆ.
ಕೊಡಗು ಸಂಪಾಜೆ ಬೈಲಿನ ಶಿರಾಡಿ ದೈವಸ್ಥಾನದ ಪಕ್ಕದಲ್ಲಿರುವ ಭೋಜಪ್ಪ ಗೌಡ, ಸೃಜನ್, ಶ್ರೀಧರ ಪಡ್ಪು ಹೊನ್ನಪ್ಪ ಗೌಡ, ವಾಸುದೇವ ಎಂಬವರಿಗೆ ಸೇರಿದ ಭತ್ತದ ಗದ್ದೆಗೆ ಸುಮಾರು ಆರು ಕಾಡಾನೆಗಳ ಹಿಂಡು ರಾತ್ರಿ ದಾಳಿ ನಡೆಸಿದ್ದು, ಭತ್ತಕೃಷಿ, ಸಮೀಪದಲ್ಲಿದ್ದ ಬಾಳೆಕೃಷಿಯನ್ನು ನಾಶಪಡಿಸಿವೆ.
ಶಿರಾಡಿ ದೈವಸ್ಥಾನದ ಸಭಾಂಗಣದಲ್ಲಿ ಸಂಗ್ರಹಿಸಿರಿಸಿದ್ದ ಭತ್ತವನ್ನು ಆನೆಗಳ ಹಿಂಡು ಚೆಲ್ಲಾಪಿಲ್ಲಿ ಮಾಡಿರುವುದಾಗಿ ತಿಳಿದುಬಂದಿದೆ.
ಸ್ಥಳೀಯರು ಕೂಡಲೇ ಸಮೀಪದ ಸಂಪಾಜೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಪಟಾಕಿ ಸಿಡಿಸಿ, ಭತ್ತದ ಗದ್ದೆಯಿಂದ ಸಮೀಪದ ಕಾಡಿನತ್ತ ಓಡಿಸಿರುವುದಾಗಿ ತಿಳಿದುಬಂದಿದೆ.