ಸೋಣಂಗೇರಿ; ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಮಹಾಕುಂಭಾಭಿಷೇಕ

0

ಧಾರ್ಮಿಕ ಸಭಾ ಕಾರ್ಯಕ್ರಮ- ಪಡಿಪೂಜೆ

ಸೋಣಂಗೇರಿಯ
ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ದೇವಸ್ಥಾನದ ನೂತನ ನವೀಕರಣ ಗರ್ಭಗುಡಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಹಾ ಕುಂಭಾಭಿಷೇಕ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಸುಳ್ಯ ಇವರ ನೇತೃತ್ವದಲ್ಲಿ ಡಿ. 22 ಮತ್ತು 23 ರಂದು ನಡೆಯಿತು. ಡಿ.22ರಂದು ಬೆಳಗ್ಗೆ ಗಣಪತಿ ಹವನ, ಹಸಿರುವಾಣಿ ಸಮರ್ಪಣೆ, ಉಗ್ರಾಣ ಮುಹೂರ್ತ ನಡೆಯಿತು.

ಸಂಜೆ ತಂತ್ರಿಗಳ ಆಗಮನವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಡಿ.23ರಂದು ಪೂರ್ವಾಹ್ನ ಮಕರ ಲಗ್ನದ ಶುಭಮುಹೂರ್ತದಲ್ಲಿ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠೆ, ಉಪಕಲಶಾಭಿಷೇಕ,ಶಿಖರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ಮಹಾ ಕುಂಭಾಭಿಷೇಕ,ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅಡ್ಪಂಗಾಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಇದರ ಧರ್ಮದರ್ಶಿಗಳಾದ ಶಿವಪ್ರಕಾಶ್ ಗುರುಸ್ವಾಮಿಯವರು ಉದ್ಘಾಟಿಸಿ ಮಾತನಾಡಿ ಅಯ್ಯಪ್ಪ ವೃತಧಾರಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ವೃತಪಾಲನೆಯಲ್ಲಿ ಹಿನ್ನಡೆಯಾಗುತ್ತಿರುವುದನ್ನು ಕಾಣುತ್ತೇವೆ. ಆದರೆ ಯಾವುದೇ ಕಾರಣಕ್ಕೂ ವೃತ ನಿಷ್ಠೆಯನ್ನು ಬಿಡಬಾರದು. ವೃತಧಾರಿಗಳು ದುಶ್ಚಟದಿಂದ ದೂರವಿರಬೇಕು. ಮಕ್ಕಳಿಂದ ಮೊಬೈಲ್ ದೂರವಿಟ್ಟು ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಬೇಕು ಎಂದು ಹೇಳಿದ ಅವರು ದೇವಸ್ಥಾನ, ಮಂದಿರಗಳಿಗೆ ನೀಡಿದ ಕೊಡುಗೆಗಳಿಗೆ ನಮ್ಮ‌ ಹೆಸರು ಬರೆಸುವ ಅಗತ್ಯವಿಲ್ಲ, ದೇವರೇ ನಮಗೆ ಕೊಟ್ಟದ್ದನ್ನು ನಾವು ಮತ್ತೆ ದೇವರಿಗೆ ಕೊಡುವುದಕ್ಕೆ ನಮ್ಮ ಹೆಸರನ್ನು ಬರೆಸುವ ಅಗತ್ಯವೇನಿದೆ. ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಎಸ್ ಅಂಗಾರ ಮಾತನಾಡಿ ಧರ್ಮವನ್ನು ತಿಳಿದು ಅನುಷ್ಠಾನ ಮಾಡಿದಾಗ ನಮ್ಮ ಧರ್ಮ ಸಂಸ್ಕೃತಿ ಬೆಳೆಯುತ್ತದೆ ಎಂದು ಹೇಳಿದರು


ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷರಾದ ನಾಗರಾಜ ಡಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಧುರೀಣ ಜಿ .ಆರ್. ಮೋಹನ್ ಪಿತಾಂಬರ ನಾಯರ್,ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಪ್ರಸಾದ್ ಕುಕ್ಕಂದೂರು, ಶ್ರೀಮತಿ ಅಂಬಿಕಾ ,ಈಶ್ವರ ನಾಯ್ಕ,ಉದ್ಯಮಿ ಆರ್. ಶಿವಲಿಂಗಂ, ವಿಜಯ್ ಕುಮಾರ್ ಸಿಂಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೈದಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಕ್ಷೇತ್ರದ ತಂತ್ರಿಗಳಾದ ವೆ.ಮೂ.ನಾಗರಾಜ್ ಭಟ್ ರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲ. ಗಂಗಾಧರ ರೈ ಸೋಣಗೇರಿ ಸ್ವಾಗತಿಸಿ, ಸತ್ಯ ಶಾಂತಿ ತ್ಯಾಗಮೂರ್ತಿ ವಂದಿಸಿದರು. ಕನ್ನದಾಸನ್ ಕುಕ್ಕಂದೂರು ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಮಹೇಶ್ ಹುಲಿಮನೆ ಮತ್ತು ಅಯ್ಯಪ್ಪ ವೃತಧಾರಿಗಳು ಸಹಕರಿಸಿದರು.