ಆರೋಪಿಗಳಿಗೆ ಶಿಕ್ಷೆ ನೀಡಿದ ನ್ಯಾಯಾಲಯ
ಮೂರು ವರ್ಷಗಳ ಹಿಂದೆ ಸುಳ್ಯದಲ್ಲಿ ನಡೆದ ಅಪಘಾತ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ನ್ಯಾಯಾಲಯ ಶಿಕ್ಷೆ ನೀಡಿರುವುದಾಗಿ ತಿಳಿದುಬಂದಿದೆ.
ಆಪಾದಿತರಾದ ಪಿ.ಡಿ.ದೇವಿಪ್ರಸಾದ್ ಮತ್ತು ದೇವಿಪ್ರಸಾದ್ ರವರು 2022ರ ಡಿಸೆಂಬರ್ 01 ರಂದು ರಾತ್ರಿ ಸಮಯ 7.30 ಗಂಟೆಗೆ ಸುಳ್ಯ ಕಸಬಾ ಗ್ರಾಮದ ರಥಬೀದಿಯಲ್ಲಿರುವ ಶ್ರೀದೇವಿ ಸ್ಟುಡಿಯೋ ಎದುರು ಹಾದು ಹೋಗುವ ಡಾಮಾರು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರಿ ಮಾಡಲು ಚಾಲನಾ ಪರವಾನಿಗೆ ಹೊಂದದೇ ಹಾಗೂ ವಿಮಾ ಚಾಲ್ತಿಯಲ್ಲಿಲ್ಲದ 2 ನೇ ಆರೋಪಿತನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 21 ಯ 3717 ನೇದನ್ನು ಚೆನ್ನಕೇಶವ ದೇವಸ್ಥಾನ ಕಡೆಯಿಂದ ಕಟ್ಟೆ ಜಂಕ್ಷನ್ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಆತನ ಎದುರು ಕಟ್ಟೆ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾವೊಂದನ್ನು ಓವರ್ ಟೇಕ್ ಮಾಡಲು ತನ್ನ ತೀರಾ ಬಲಬದಿಗೆ ಸವಾರಿ ಮಾಡಿ ಕಟ್ಟೆ ಜಂಕ್ಷನ್ ಕಡೆಯಿಂದ ಚೆನ್ನಕೇಶವ ದೇವಸ್ಥಾನ ಕಡೆಗೆ ಶಶಿಕಲಾ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ನಂಬ್ರ ಕೆಎ 19 ಹೆಚ್ ಡಿ 2312 ನೇದಕ್ಕೆ ಡಿಕ್ಕಿಯುಂಟು ಮಾಡಿದ ಪರಿಣಾಮ ಶಶಿಕಲಾರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸಾಮಾನ್ಯ ಸ್ವರೂಪದ ರಕ್ತಗಾಯಗಳುಂಟಾಗಲು ಕಾರಣರಾದ ಅಪರಾಧ ಎಸಗಿರುವುದಾಗಿದೆ. ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಸಮಕ್ಷಮ ನಡೆದು 2025 ಫೆ 25 ರಂದು ಆರೋಪಿತರ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯನ್ನು ಕೆಳಕಂಡಂತೆ ಪ್ರಕಟಿಸಿರುತ್ತಾರೆ.
1ನೇ ಆರೋಪಿಗೆ ಕಲಂ 279 ರಲ್ಲಿ 3 ತಿಂಗಳು ಸಾದಾ ಕಾರಾಗೃಹ ವಾಸ ಮತ್ತು ₹1,000/- ದಂಡ , ದಂಡ ಕಟ್ಟಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸ, ಕಲಂ 337 ರಡಿಯಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹500/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸ , ಐಎಂವಿ ಕಾಯ್ದೆ 3(1) ಜೊತೆಗೆ 181 ರಡಿಯಲ್ಲಿ ₹5,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಕಾರಾಗೃಹ ವಾಸ. ಈ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದು ಎಂಬುದಾಗಿ ಆದೇಶಿಸಿರುತ್ತಾರೆ.



2 ನೇ ಆರೋಪಿತನಿಗೆ ಐಎಂವಿ ಕಾಯ್ದೆ ಕಲಂ 5(1) ಜೊತೆಗೆ 180 ರಡಿಯಲ್ಲಿ ₹5.000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಕಾರಾಗೃಹ ವಾಸ, ಕಲಂ 146 ಜೊತೆಗೆ 196 ರಲ್ಲಿ ₹2,000/- ದಂಡ , ದಂಡ ಕಟ್ಟಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಕಾರಾಗೃಹ ವಾಸ .
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸಿರುತ್ತಾರೆ.