ಮೆಸ್ಕಾಂ, ತೋಟಗಾರಿಕಾ ಇಲಾಖೆಗಳ ಬಗ್ಗೆ ಸುದೀರ್ಘ ಚರ್ಚೆ
ಕಲ್ಮಡ್ಕ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಮಾ. 11ರಂದು ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳರ ಅಧ್ಯಕ್ಷತೆಯಲ್ಲಿ ಪಡ್ಪಿನಂಗಡಿಯ ಶಿವಗೌರಿ ಕಲಾ ಮಂದಿರದಲ್ಲಿ ನಡೆಯಿತು.
ಗ್ರಾಮ ಸಭೆಯ ನೋಡೆಲ್ ಅಧಿಕಾರಿ ಸುಳ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ತಡವಾಗಿ ಸಭೆಗೆ ಆಗಮಿಸಿದ್ದರಿಂದ ಅಸಾಮಾಧನಗೊಂಡ ಅಧ್ಯಕ್ಷರು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸಿಬೇಕು. ಸಂತೆಗೆ ಬಂದ ಹಾಗೆ ಬರುವುದಲ್ಲ. ಇಷ್ಟು ಜನ ಬಂದಿರುವವರಿಗೆ ಕೆಲಸ ಇಲ್ಲದೇ ಬಂದಿದ್ದಾರೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಗ್ರಾಮಸಭೆ ಆರಂಭಗೊಂಡಿತು.
ಪಡ್ಪಿನಂಗಡಿ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದ ಬಳಿಕ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಕೆ ವಾರ್ಡ್ ಸಭೆಗಳ ನಡಾವಳಿ ಮತ್ತು ಗ್ರಾಮ ಸಭೆಯ ವರದಿಯನ್ನು ವಾಚಿಸಿದರು. ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಎಂ, ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ್, ಹರೀಶ್ ಎಂ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಹಾಜಿರಾ ಗಫೂರ್, ಶ್ರೀಮತಿ ಪವಿತ್ರ ಕುದ್ವ, ಶ್ರೀಮತಿ ಜಯಲತಾ ಕೆ.ಡಿ ಮತ್ತು ಇಲಾಖಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರು ಸಭಾ ಕಲಾಪದಲ್ಲಿ ಭಾಗವಹಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ವರದಿಯ ಬಗ್ಗೆ ಮಾತನಾಡಿದ ಮಾಜಿ. ತಾ.ಪಂ. ಸದಸ್ಯ ಗಫೂರ್ ಕಲ್ಮಡ್ಕ 15ನೇ ಹಣಕಾಸು ಅನುದಾನವನ್ನು 37 ಲಕ್ಷ ಅಖೈರು ಶಿಲ್ಕು ಇಟ್ಟುಕೊಂಡದ್ದು ಯಾಕೆ? ಮಾರ್ಚ್ ಮುಗಿಯುತ್ತಾ ಬಂತಲ್ಲಾ? ಕೆಲಸ ಆಗಿ ಬಿಲ್ ಮಾಡಿಲ್ವಾ ಎಂದು ಪ್ರಶ್ನಿಸಿದರು. ಅದಕ್ಕೆ ಪಿಡಿಒ ಮತ್ತು ಅಧ್ಯಕ್ಷರು ಬಿಲ್ ಪೆಂಡಿಂಗ್ ಇಲ್ಲ. ಮಾರ್ಚ್ ಕೊನೆಯ ಒಳಗೆ ಬೇರೆ ಬೇರೆ ಕಾಮಗಾರಿಗಳಿಗೆ ವಿನಿಯೋಗ ಮಾಡಲಿದ್ದೇವೆ ಎಂದರು.
ಮೆಸ್ಕಾಂ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ:
ಬಳಿಕ ಮೆಸ್ಕಾಂ ಅಧಿಕಾರಿ ಮಾಹಿತಿ ನೀಡಿದಾಗ ವೆಂಕಪ್ಪ ಎನ್.ಪಿ ಯವರು ಬೆಳಗಜೆಯಲ್ಲಿ ಕಂಬಗಳ ಅಂತರ ಜಾಸ್ತಿ ಇದ್ದು, ತಂತಿಗಳು ಜೋತು ಬಿದ್ದುಕೊಂಡಿದೆ. ಅದಕ್ಕೆ ಮರ, ಬಳ್ಳಿಗಳು ತಾಗಿಕೊಂಡಿದ್ದು, ಅಪಾಯ ಇದೆ. ಗಣೇಶ್ ಭೀಮಗುಳಿ ಧ್ವನಿ ಗೂಡಿಸಿ 5-6 ಗ್ರಾಮ ಸಭೆಗಳಲ್ಲಿ ಪ್ರಸ್ತಾಪ ಆಗಿದೆ ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ನಡೆದುಕೊಂಡು ಹೋಗುವವರಿಗೆ ತಾಗುವಷ್ಟು ಬಾಗಿಕೊಂಡಿದೆ. ಹಲವು ಬಾರಿ ಮೆಸ್ಕಾಂಗೆ ದೂರು ನೀಡಿದರೂ ಪ್ರಯೋನನ ಆಗಿಲ್ಲ ಎಂದರು. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದರು. ಪ್ರತೀ ಗ್ರಾಮ ಸಭೆಯಲ್ಲಿ ಇದರದ್ದೇ ಚರ್ಚೆ ಆಯಿತು. 15 ದಿನಗಳೊಳಗೆ ಪರಿಶೀಲಿಸಿ ವರದಿ ನೀಡಿ ನಾವು ಸಂಬಂಧಪಟ್ಟ ಗ್ರಾಮಸ್ಥರಿಗೆ ತಿಳಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದರು. ಕುಲಾಯಿತೋಡಿಯಲ್ಲಿ ಹಳೆ ಟಿಸಿ, ತಂತಿಗಳಿವೆ. ಅದನ್ನು ಬದಲಾಯಿಸಬೇಕೆಂದು ಗಫೂರ್ ಹೇಳಿದರೆ, ಮುಚ್ಚಿಲದಲ್ಲಿ ಲೋ ವೋಲ್ಟೇಜ್ ಇದೆ. ಹೊಸ ಟಿಸಿಯಿಂದ ಗೃಹಬಳಕೆಗೆ ಸಂಪರ್ಕ ಕೊಟ್ಟಿಲ್ಲ ಎಂದು ನವೀನ್ ಮತ್ತು ಹಮೀದ್ ಮರಕ್ಕಡ ಹೇಳಿದರು. ಅಧಿಕಾರಿಯವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಮಹೇಶ್ ಕರಿಕ್ಕಳ ಹೇಳಿದರು. ರಜಿತ್ ಭಟ್ ರು ಮಾತನಾಡಿ ಮಂಚಿಕಟ್ಟೆಯಲ್ಲಿ ಖಾಸಗಿ ಜಮೀನಿನಲ್ಲಿ ವಿದ್ಯುತ್ ಲೈನ್ ಪಟಸಾಗಿದ್ದು ಅದನ್ನು ರಸ್ತೆ ಬದಿಗೆ ಸ್ಥಳಾಂತರಿಸಬೇಕೆಂದು ಹಲವು ಬಾರಿ ಬೇಡಿಕೆ ಇಟ್ಟದ್ದೇವೆ ಎಂದರು. ಸುರೇಶ್ ಕುಮಾರ್ ನಡ್ಕ 3 ಫೇಸ್ ವಿದ್ಯುತ್ ಯಾವಾಗ ಕೊಡುತ್ತೀರಿ ಎಂದು ನಿಖರವಾಗಿ ತಿಳಿಸಿ. ಮಧ್ಯಾಹ್ನ ಕೊಟ್ಟರೆ ತೋಟಕ್ಕೆ ನೀರು ಹಾಯಿಸದ ಕೂಡಲೇ ಆವಿಯಾಗುತ್ತದೆ. ಸಮಯ ಬದಲಾವಣೆ ಮಾಡಿ ನಮಗೆ ತಿಳಿಸಿ ಎಂದರು. ಇದಕ್ಕೆ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳರೂ ಧ್ವನಿಗೂಡಿಸಿದರು. ಪ್ರತೀ ಗ್ರಾಮಸಭೆಗಳಲ್ಲೂ ಇಲಾಖೆಗಳ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಾರೆ ಎಂದರೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಎಂದಾಯಿತು. ಇಲಾಖೆಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿ ಕೃಷಿಕರೊಂದಿಗೆ ಸಹಕರಿಸಿ ಎಂದರು. ಕುಲ್ದೀಪ್ ಸುತ್ತುಕೋಟೆಯವರು ಕಾಂತುಕುಮೇರಿ ಭಾಗದಲ್ಲಿ ರಸ್ತೆಯಲ್ಲೇ ವಿದ್ಯುತ್ ಕಂಬ ಇದೆ. ಕೆಲವು ಕಾಡಿನಲ್ಲಿದೆ. ಅದಕ್ಕೆ ಮರಗಳು ವಾಲಿಕೊಂಡಿದೆ. ಕೆಲವು ಕಂಬಗಳು 45 ಡಿಗ್ರಿ ವಾಲಿಕೊಂಡಿವೆ. ಇದರ ಬಗ್ಗೆ ಎಷ್ಟು ಬಾರಿ ಇಲಾಖೆಗೆ ದೂರು ನೀಡಿದರೂ ಸ್ಪಂದಿಸ್ತಾ ಇಲ್ಲ. ಮಳೆಗಾಲದಲ್ಲಿ ಮರದ ಗೆಲ್ಲುಗಳು ಬಿದ್ದರೆ ವಾರಗಟ್ಟಲೆ ವಿದ್ಯುತ್ ಸರಬರಾಜು ಇರುವುದಿಲ್ಲ. 117 ವೋಲ್ಟ್ ಇರುತ್ತದೆ. ಮಿಕ್ಸಿ ಕೂಡ ಕೆಲಸ ಮಾಡುವುದಿಲ್ಲ. ಯಾಕೆ ಈ ನಿರ್ಲಕ್ಷ ಎಂದು ಪ್ರಶ್ನಿಸಿದರು. ಮಡಿವಾಲಮಜಲಿನಲ್ಲಿ ಗುಡ್ಡದಿಂದ ಗುಡ್ಡಕ್ಕೆ ತಂತಿ ಎಳೆದಿದ್ದಾರೆ. ಕಂಬಗಳ ನಡುವೆ 250 ಮೀ. ಅಂತರ ಇದಬಹುದು. ಮೂರು ಮನೆಗಳ ಮೇಲೆ ಹಾದು ಹೋಗುತ್ತದೆ. ಅಪಾಯ ಎದುರಾಗುವ ಮುನ್ನ ಲೈನ್ ಬದಲಾಯಿಸಿ ಎಂದು ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು. ಗಣೇಶ್ ಭೀಮಗುಳಿಯವರು ಕರಿಕ್ಕಳ ಪಂಜ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಮರಗಳು ವಾಲಿಕೊಂಡಿದ್ದು, ಅಪಾಯ ಇದೆ. ಇದರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದರು. ಆಗ ಸುರೇಶ್ ಕುಮಾರ್ ನಡ್ಕರು ಗ್ರಾಮ ಸಭೆಯಲ್ಲಿ ನಡೆದ ಚರ್ಚೆಗಳು ಬರೇ ಪುಸ್ತಕದಲ್ಲಿ ಮಾತ್ರ ಇರುತ್ತದೆ. ಕಾರ್ಯಗತ ಆಗುವುದಿಲ್ಲ. ಪಂಚಾಯತ್ ಆಡಳಿತ ಮಂಡಳಿ ಈ ಬಗ್ಗೆ ಹಿಂಬಾಲಿಸಬೇಕು ಎಂದರು. ಆಗ ಗಫೂರ್ ರವರು ಇಲ್ಲಿ ನಡೆದ ಚರ್ಚೆಗಳನ್ನು ನೀವು ಮೇಲಾಧಿಕಾರಿಗಳಿಗೆ ಕಳಿಸ್ತೀರಿ. ಅವರು ಬದಿಗಿಡ್ಡು ಕೂರುತ್ತಾರೆ ಅಷ್ಟೇ ಆಗೋದು. ಇದನ್ನು ಪಂಚಾಯತ್ ಗಮನಿಸುತ್ತಾ ಇರಬೇಕು. ಶಾಸಕರು ಸಭೆಗೆ ಬಂದರೆ ಪರಿಹಾರ ಸಿಗಬಹುದು. ಅವರನ್ನು ಒಂದು ಗ್ರಾಮಸಭೆಗಾದರೂ ಕರೆಸಿ ಎಂದರು.
ಗಫೂರ್ ಕಲ್ಮಡ್ಕ ಮಾತನಾಡಿ ಕುಲಾಯಿತೋಡಿ 33 ಕೆ.ವಿ ಸ್ಥಾವರದ ವಿಷಯ ಎಲ್ಲಿಯ ತನಕ ತಲುಪಿದೆ ಮಾಹಿತಿ ನೀಡಿ. ನೀವು ಗ್ರಾಮ ಸಭೆಗೆ ಬರುವಾಗ ಇದುವರೆಗೆ ಇಲಾಖೆಯಿಂದ ಏನು ಪ್ರಗತಿ ಆಗಿದೆ ಎಂಬ ಮಾಹಿತಿ ನೀಡಬೇಕು ಎಂದರು. ಆಗ ಮಹೇಶ್ ಕುಮಾರ್ ರವರು ಈ ಬಗ್ಗೆ ಇಲಾಖೆಯ ಎಂ.ಡಿ. ಜೊತೆ ಮಾತನಾಡಿದ್ದೇನೆ. ಅರಣ್ಯ ಇಲಾಖೆಗೆ ಹಣ ಪಾವತಿ ಆಗಿದೆ. ಪ್ರಗತಿ ಹಂತದಲ್ಲಿದೆ ಎಂದರು. ಆಗ ಮೆಸ್ಕಾಂ ಅಧಿಕಾರಿ ಡಿಪಿಆರ್ ಮಾಡಿ ಕೊಟ್ಟಿದ್ದೇವೆ. ಪೂರ್ಣ ಮಾಹಿತಿ ಸಂಗ್ರಹಿಸಿ ನೀಡುತ್ತೇನೆ ಎಂದರು.
ಎಳೆಚುಕ್ಕಿ ರೋಗಕ್ಕೆ ಪರಿಹಾರ ನೀಡಿ:
ಸಹಾಯಕ ತೋಟಗಾರಿಕಾ ಅಧಿಕಾರಿ ಮಾಹಿತಿ ನೀಡಿದಾಗ ಗ್ರಾಮದ ಹಲವು ಕೃಷಿಕರು ಎಳೆಚುಕ್ಕಿ ರೋಗದಿಂದ ಕಂಗೆಟ್ಟಿದ್ದಾರೆ. ನೀವು ಇಲಾಖೆಯಿಂದ ಒಂದು ಕೀಟನಾಶಕ ನೀಡುತ್ತೀರಿ. ಇದರಿಂದ ರೋಗ ಹೋಗುವುದಿಲ್ಲ. ತೆರೆದ ಮಾರುಕಟ್ಟೆಯಲ್ಲಿ ಕಲಬೆರಕೆಯ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಳೆಚುಕ್ಕಿ ರೋಗ ಸೇರಿದಂತೆ ಇನ್ನಿತರ ರೋಗಗಳಿಂದ ಅಡಿಕೆ ಫಸಲು ಇಲ್ಲದೆ ರೈತರು ಕಂಗಾಳಾಗಿದ್ದಾರೆ. ಇದೇ ಮುಂದುವರೆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ. ಇದನ್ನು ಇಲಾಖೆ ಗಂಭೀರವಾಗಿ ತೆಗೆದುಕೊಂಡು ರೈತರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಒದಗಿಸಬೇಕು ಎಂದು ಮಹೇಶ್ ಕುಮಾರ್ ಕರಿಕ್ಕಳ ಹೇಳಿದರಲ್ಲದೆ, ಇಲಾಖೆಯಿಂದ ನೀಡುವ ಸುಣ್ಣ ಕಬಡ್ಡಿ ಕೋರ್ಟಿಗೆ ಗೆರೆ ಎಳೆಯಲು ಮಾತ್ರ ಆಗಬಹುದಷ್ಟೆ. ಕಳಪೆ ಗುಣಮಟ್ಟದಿಂದ ಕೂಡಿದೆ. ಟರ್ಪಾಲು ಸಬ್ಸಿಡಿ ಸೇರಿ ಒಂದು ಸಾವಿರ ಬಿಲ್ ಮಾಡ್ತೀರಿ. ಹೊರಗೆ ಅದೇ ಲರ್ಪಲ್ 800 ರೂಗೆ ಸಿಗುತ್ತದೆ. ರೈತರನ್ನು ವಂಚಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ ಎಂದರು. ಆಗ ವೆಂಕಪ್ಪ ಎನ್.ಪಿ, ರಜಿತ್ ಭಟ್, ಗಣೇಶ್ ಭೀಮಗುಳಿಯವರು ಇಲಾಖೆಯಿಂದ ಸಿಗುವ ಸುಣ್ಣ ನೂರಕ್ಕೆ ನೂರು ಕಳಪೆ. ನೀವು ಪಂಬೆತ್ತಾಡಿ ಗ್ರಾಮಕ್ಕೆ ಇದುವರೆಗೆ ನೀಡಿ ಅನುದಾನಗಳ ವಿವಿರ ನೀಡಿ ಎಂದು ಹೇಳಿದರು. ಆಗ ರಜಿತ್ ಭಟ್ 60 ಫೀಟ್ ದೋಂಟಿ ಅಂತ ಹೇಳಿ 55 ಫೀಟ್ ದೋಂಟಿ ಕೊಡ್ತೀರಿ ಎಂದರು. ಆಗ ಅಧಿಕಾರಿ ರೈತರ ಯಾವುದೇ ಸಮಸ್ಯೆಗಳಿದ್ದರೆ ನಮಗೆ ಕರೆ ಮಾಡಿ ನಾವು ಸ್ಥಳಕ್ಕೆ ಬರುತ್ತೇವೆ. ಜನ ಸೇರಿಸಿ ತರಬೇತಿ, ಮಾಹಿತಿ ಕಾರ್ಯಗಾರ ನಡೆಸುತ್ತೇವೆ. 55 ಫೀಟ್ ದೋಂಟಿ 5 ಫೀಟ್ ಮನುಷ್ಯನ ಎತ್ತರ ಸೇರಿ ಲೆಕ್ಕ ಕೊಡುವುದು ಎಂದರು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯಲ್ಲಿ ಒಂದಷ್ಟು ಜನರ ಹೆಸರು ಇರುತ್ತದೆ. ಯಾವುದೇ ಸಾಮಾಗ್ರಿಗಳು, ಅನುದಾನಗಳು ಬಂದರೆ ಅವರಿಗೆ ಮಾತ್ರ ಫೋನ್ ಹೋಗ್ತದೆ. ಗ್ರಾಮ ಸಭೆಯಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹಾರಿಕೆಯ ಉತ್ತರ ನೀಡುತ್ತಾರೆ. ಚರ್ಚೆ ವ್ಯರ್ಥ. ಮುಂದಿನ ಗ್ರಾಮಸಭೆಯಲ್ಲಿ ನಮ್ಮ ಗ್ರಾಮಕ್ಕೆ ಎಷ್ಟು ಅನುದಾನ, ಎಷ್ಟು ಕೃಷಿಕರ ಭೇಟಿ ಮಾಡಿದ್ದೀರೆಂದು ಮಾಹಿತಿ ಕೊಡಿ ಎಂದು ಗಫೂರ್, ಮಹೇಶ್ ಕುಮಾರ್ ಹೇಳಿದರು.
ಹಕ್ಕುಪತ್ರ ನೀಡಿದ ಬಡವರಿಗೆ ಆರ್.ಟಿ.ಸಿ. ನೀಡಿ – ಗಫೂರ್
ಕಂದಾಯ ಇಲಾಖೆಯಿಂದ ಕಳೆದ 30 ವರ್ಷಗಳಿಂದ ಹಲವು ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದೀರಿ. ಆದರೆ ಆರ್.ಟಿ.ಸಿ. ನೀಡಿಲ್ಲ. ಇದರಿಂದಾಗಿ ಅವರಿಗೆ ಮನೆ ದುರಸ್ತಿ, ಮಾಡಲು, ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಹಕ್ಕುಪತ್ರ ನೀವೇ ನೀಡಿದಲ್ವೇ? ಆಗ ಪರಿಶೀಲಿಸಿಯೇ ಕೊಟ್ಟದ್ದಲ್ವಾ? ಮತ್ತೆ ಆರ್.ಟಿ.ಸಿ. ನೀಡಲು ಸತಾಯಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. ಅದಕ್ಕೆ ಇಲಾಖಾಧಿಕಾರಿ ಸುರಕ್ಷತ ಅರಣ್ಯ ಅಂತ ಇರುವುದರಿಂದ ಸಮಸ್ಯೆ ಆಗಿದೆ. ನಾವು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವಷ್ಟೆ. ಆರ್ಡರ್ ಮಾಡುವ ಅಧಿಕಾರ ನಮಗಿಲ್ಲ ಎಂದರು.
ಕಾಮಗಾರಿ ಸ್ಥಳ ಬದಲಾವಣೆ ಮಾಡಿರುವುದಕ್ಕೆ ಲೋಕಾಯಕ್ತ ದೂರು ನೀಡಲು ನಿರ್ಧಾರ
ಪಿಡಬ್ಲ್ಯೂಡಿ ಇಂಜಿನಿಯರ್ ಮಣಿಕಂಠರು ಮಾಹಿತಿ ನೀಡಿದಾಗ ವೆಂಕಪ್ಪ ಎನ್.ಪಿ.ಯವರು ಮಾತನಾಡಿ ಪಂಬೆತ್ತಾಡಿಯಲ್ಲಿ ಕಾಮಗಾರಿ ಮುಗಿಸಿ ರಸ್ತೆ ಬದಿಗೆ ಮಣ್ಣು ಹಾಕಿಲ್ಲ. ವಾಹನ ಚಾಲಕರು ಪರದಾಡುತ್ತಿದ್ದಾರೆ. ಅರಮನೆಗಯ – ಕಾಂತುಕುಮೇರಿ ಕಾಲನಿಗೆ ಮಂಜೂರಾದ ಅನುದಾನವನ್ನು ಬೇರೆ ರಸ್ತೆಗೆ ವಿನಿಯೋಗ ಮಾಡಿದ್ದಾರೆ ಎಂದರು. ಆಗ ಮಹೇಶ್ ಕುಮಾರ್ ಕರಿಕ್ಕಳರು ಈ ಬಗ್ಗೆ ನಮಗೆ ದೂರು ಬಂದಿದೆ. ಹಾಗೆಯೇ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಬಾರಿ ಸುಮಾರು 17 ಸೋಲಾರ್ ಲ್ಯಾಂಪ್ ಅಳವಡಿಸಿದ್ದಾರೆ. ಪಂಚಾಯತ್ ಗೆ ಯಾವುದೇ ಮಾಹಿತಿ ಇಲ್ಲ. ಈಗ ಯಾವುದೂ ಉರಿಯುತ್ತಿಲ್ಲ. ಕೆಲವನ್ನು ಬಿಚ್ಚಿ ತೆಗೆದುಕೊಂಡು ಹೋಗಿದ್ದಾರೆ. ಈ ಎರಡು ವಿಚಾರಗಳನ್ನು ಒಂದು ವಾರದಲ್ಲಿ ಲೋಕಾಯುಕ್ತಕ್ಕೆ ಬರೆಯುತ್ತೇವೆ ಎಂದರು.
ಶಾಸಕ, ಸಂಸದರ ಅನುದಾನಕ್ಕೆ ಮನವಿ ನೀಡಲು ಸಲಹೆ
ಸಾಯಿನಾರಾಯಣ ಕಲ್ಮಡ್ಕ ಮಾತನಾಡಿ ಕುಲಾಯಿತೋಡಿ ರಸ್ತೆಯನ್ನು ಎರಡೂ ಕಡೆಗಳಲ್ಲಿ ಅಭಿವೃದ್ಧಿ ಪಡಿಸಿ ಮಧ್ಯೆ ಹಾಗೆ ಬಿಟ್ಟಿದ್ದಾರೆ. ಮಾಡಿದ್ದೂ ಕಳಪೆಯಾಗಿದೆ. ಕಲ್ಮಡ್ಕದಲ್ಲಿ ಹೊನಲು ಬೆಳಕಿನ ಕ್ರೀಡಾಂಗಣ ಅಂತ ಬೋರ್ಡ್ ಹಾಕಿದ್ದಾರೆ. ಒಂದೇ ಒಂದು ಲೈಟ್ ತೋರಿಸಿಕೊಡಿ. ಈ ಬಗ್ಗೆ ಕಳೆದ ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆ ಎಂದು ಹೇಳಿದರು. ರಸ್ತೆಯ ಕಾಮಗಾರಿಯನ್ನು ಪರಿಶೀಲಿಸುತ್ತೇನೆ. ಕ್ರೀಡಾಂಗಣ ನಮ್ಮ ಇಲಾಖೆಗೆ ಬರುವುದಿಲ್ಲ ಎಂದು ಇಂಜಿನಿಯರ್ ಉತ್ತರಿಸಿದರು. ಆಗ ಗಫೂರ್ ಕಲ್ಮಡ್ಕ ಕುಲಾಯಿತೋಡಿ ರಸ್ತೆ ಅಭಿವೃದ್ಧಿಗೆ ಶಾಸಕರಿಗೆ ಮತ್ತು ಸಂಸದರಿಗೆ ಮನವಿ ನೀಡಿ ಎಂದರು. ಆಗ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ ಕಳೆದ 35 ವರ್ಷಗಳಿಂದ ಎಷ್ಟು ಬಾರಿ ಮನವಿ ನೀಡಿದ್ದೇವೆಂದು ವೆಂಕಪ್ಪಣ್ಣನಿಗೆ ಗೊತ್ತು. ಅವರು 7 ಬಾರಿ ಬೆಂಗಳೂರಿಗೆ ಹೋಗಿದ್ದಾರೆ. ಫಲಿತಾಂಶ ಮಾತ್ರ ಶೂನ್ಯ. ಅದಕ್ಕಾಗಿ ಈ ಬಾರಿ ಚಾಲೆಂಜಾಗಿ ಗಫೂರ್, ರಜಿತ್ ಭಟ್ ಮತ್ತಿತರರ ಸಹಕಾರ ಪಡೆದು ಸ್ಪೀಕರ್ ಯು.ಟಿ. ಖಾದರ್ ರವರ ಮೂಲಕ 2 ಕೋಟಿ ಅನುದಾನ ತರಿಸಿದ್ದೇನೆ. ಇನ್ನೂ 2 ಕೋಟಿ ತರಿಸ್ತೇನೆ ಎಂದರು. ಆಗ ವೆಂಕಪ್ಪ ಎನ್.ಪಿ.ಯವರು. ಪಂಬೆತ್ತಾಡಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ಬಂದಿರುವುದು. ಇದಕ್ಕಾಗಿ ಮಹೇಶ್ ಕುಮಾರ್ ಕರಿಕ್ಕಳರಿಗೆ ಚಪ್ಪಾಳೆಯ ಮೂಲಕ ಅಭಿನಂದಿಸುವ ಎಂದರು.
ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಬ್ಲಿಕ್ ಸ್ಕೂಲ್ ಆಗಬೇಕು – ವೆಂಕಪ್ಪ ಎನ್.ಪಿ
ಶಿಕ್ಷಣ ಇಲಾಖಾಧಿಕಾರಿ ಜಯಂತ್ ರು ಮಾಹಿತಿ ನೀಡಿದಾಗ
ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯ ಪಡ್ಪಿನಂಗಡಿ ಅಥವಾ ಪಂಜದಲ್ಲಿ ಪಬ್ಲಿಕ್ ಸ್ಕೂಲ್ ಆಗಬೇಕು. ನಮ್ಮೂರಿನ ಮಕ್ಕಳು ಆಂಗ್ಲ ಮಾಧ್ಯಮಕ್ಕಾಗಿ ದೂರದ ಊರಿಗೆ ಸಂಚರಿಸುವ ಅನಿವಾರ್ಯತೆ ಇದೆ ಎಂದರು. ಆಗ ಸಾಯಿನಾರಾಯಣ ಕಲ್ಮಡ್ಕರು ಗ್ರಾಮೀಣ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ. ಶಾಲೆಗಳು ಉಳಿಯಬೇಕಾದರೆ ಆಂಗ್ಲ ಮಾಧ್ಯಮವಾಗಿ ಪರಿವರ್ತಿಸಬೇಕು ಎಂದರು. ಮಕ್ಕಳ ಸಂಖ್ಯೆಯ ಆಧಾರದಲ್ಲಿ ಕೆ.ಪಿ.ಎಸ್. ಆಗುವಂತದ್ದು ಎಂದರು. ಆಗ ಗಫೂರ್ ರವರು ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸಿ. ಈ ಬಗ್ಗೆ ಇಲಾಖೆಗೆ ಬರೆಯಿರಿ ಎಂದರು. ಬಳಿಕೆ ಕೋಟೆಗುಡ್ಡೆ ಶಾಲೆಯ ಸ್ಥಳದ ದಾಖಲೆಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.