ಜೂ.30 : ಕೋಲ್ಚಾರು ಸ.ಉ.ಹಿ.ಪ್ರಾ. ಶಾಲೆಯ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ ನಿವೃತ್ತಿ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಾಗವೇಣಿ ಕೊಯಿಂಗಾಜೆ ಯವರು ಸುದೀರ್ಘ 29 ವರ್ಷದ ವೃತ್ತಿ ಸೇವೆಯಿಂದ ಜೂ.30 ರಂದು ನಿವೃತ್ತಿ ಹೊಂದಲಿದ್ದಾರೆ.

ಮಡ್ತಿಲ ಮನೆತನದ ದಿ.ಶಿವಪ್ಪ ಗೌಡ ಕೊಯಿಲ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಯ ಪುತ್ರಿಯಾಗಿರುವ ಇವರು ಐವರ್ನಾಡು ಗ್ರಾಮದ ದೇರಾಜೆ ಸ.ಕಿ.ಪ್ರಾಥಮಿಕ ಶಾಲೆ ಮತ್ತು ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ ಬಳಿಕ ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಪೂರೈಸಿರುತ್ತಾರೆ. 1986-87 ರಲ್ಲಿ ಕುಶಾಲನಗರದ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಸಿ.ಪಿ ಎಡ್ ತರಬೇತಿ ಕೋರ್ಸ್ ಮುಗಿಸಿ 1994 ರಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾದರು. ಪ್ರಥಮವಾಗಿ 1994 ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸ.ಹಿ.ಪ್ರಾ.ಶಾಲೆ ಎಲಿಮಲೆ ದೇವಚಳ್ಳದಲ್ಲಿ ವೃತ್ತಿ ಸೇವೆ ಪ್ರಾರಂಭಿಸಿದರು. ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 2009 ರಲ್ಲಿ ಆಲೆಟ್ಟಿಯ ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿರುತ್ತಾರೆ.

ಸುದೀರ್ಘ 29 ವರ್ಷದ ವೃತ್ತಿ ಸೇವೆಯ ಸಂದರ್ಭದಲ್ಲಿ ಉತ್ತಮ ತರಗತಿ ಶಿಕ್ಷಕಿಯಾಗಿಯೂ ಗುರುತಿಸಿಕೊಂಡಿದ್ದು, ರಜಾಅವಧಿಯಲ್ಲಿಯೂ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳು ಕ್ರೀಡೆ ಮತ್ತು ಯೋಗದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿಸಿದ್ದಾರೆ. ಶಾಲೆಯಲ್ಲಿ ಸೇವಾದಳ ಸ್ಥಾಪಿಸಿ,ಅದರ ನಿರ್ದೇಶಕರಾಗಿಯೂ ಸೇವೆಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಜೀವನಮೌಲ್ಯವನ್ನು ರೂಢಿಸಲು ಚಟುವಟಿಕೆಗಳನ್ನು ಹಮ್ಮಿಕೊಂಡು ಸದಾ ಕ್ರಿಯಾಶೀಲರಾಗಿರುವ ಇವರ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಹೊಂದಿ ದೇಶ,ವಿದೇಶ ಗಳಲ್ಲಿ ನೆಲೆಸಿರುತ್ತಾರೆ. ಕೊಡುಗೈ ದಾನಿಯೂ ಆಗಿರುವ ಇವರು ಶಾಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಿದ್ದಾರೆ.

ಇವರ ಪತಿ ಪ್ರಗತಿಪರ ಕೃಷಿಕರಾದ
ಶ್ರೀಧರ ಕೊಯಿಂಗಾಜೆ ಹಾಗೂ ಇಬ್ಬರು ಪುತ್ರರಾದ ಯಶಸ್ ಕೊಯಿಂಗಾಜೆ ಬೆಂಗಳೂರಿನಲ್ಲಿ ಪೋಸ್ಟ್ ಸಿಲಿಕಾನ್ ವ್ಯಾಲಿಡೇಷನ್ ಇಂಜಿನಿಯರ್ ಟೆಸ್ಸಾಲ್ವ್ ಸೆಮಿಕಂಡಕ್ಟರ್ , ಪತ್ನಿ ಮಮತಾ ಯಸ್ ಬ್ಯಾಂಕ್ ಉದ್ಯೋಗಿ. ಇನ್ನೋರ್ವ ಪುತ್ರ ತೇಜಸ್ ಕೊಯಿಂಗಾಜೆ ಸಿವಿಲ್ ಇಂಜಿನಿಯರ್.ಪತ್ನಿ ಅನನ್ಯ ಪೈನಾನ್ಸ್ ಉದ್ಯೋಗಿ ಹಾಗು ಭರತನಾಟ್ಯ ಕಲಾವಿದೆ ಆಗಿರುತ್ತಾರೆ. ಇವರು
ಪ್ರಸ್ತುತ ಕೋಲ್ಚಾರಿನ ಕೊಯಿಂಗಾಜೆ ಎಂಬಲ್ಲಿ ವಾಸವಾಗಿರುತ್ತಾರೆ.