ಮಾನ್ಸೂನ್ ಮಳೆಗೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳು

0


ವರ್ಷದ ಮೊದಲ ಮಳೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮಳೆ ಬಂತೆಂದು ಕುಣಿದಾಡುತ್ತಾರೆ. ಸ್ವಲ್ಪ ಜಾಗೃತಿ ತಪ್ಪಿದರೂ ಜ್ವರ,ಶೀತ,ಕೆಮ್ಮಿನಂತಹ ಋತುಕಾಲಿಕ ಸಮಸ್ಯೆಗೆ ಒಳಗಾಗುತ್ತಾರೆ. ತಲೆನೋವು,ಸೀನು, ಮೂಗು ಕಟ್ಟುವುದು, ಅಲರ್ಜಿ ಇತ್ಯಾದಿ ಲಕ್ಷಣಗಳು ಕೂಡ ಸರ್ವೇಸಾಮಾನ್ಯವಾಗಿದೆ. ಜೊತೆಗೆ ಉಬ್ಬಸ,ಚರ್ಮದ ಕಾಯಿಲೆ,ಗಂಟು ಗಂಟು ನೋವು ಮಳೆಗಾಲದಲ್ಲಿ ಹೆಚ್ಚಾಗುವುದನ್ನು ಕಾಣಬಹುದು. ಈ ಸಣ್ಣ ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಹೇಗೆ ಮನೆ ಔಷಧಿಯನ್ನು ಮಾಡುವುದೆಂದು ತಿಳಿಯೋಣ.

ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಕಷಾಯ:

ಒಂದುವರೆ ಲೋಟ ನೀರಿಗೆ ಎರಡರಿಂದ ಮೂರು ತುಳಸಿ ಎಲೆ,ಅರ್ಧ ಚಮಚ ಶುಂಠಿ,ಅರ್ಧ ಚಮಚ ಕರಿ ಮೆಣಸಿನ ಪುಡಿ,ಅರ್ಧ ಚಮಚ ಚಕ್ಕೆ ಪುಡಿ ಹಾಕಿ ಕುದಿಸಬೇಕು.ಹೀಗೆ,ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿದರೆ ಗಂಟಲು ಕೆರೆತ,ಕೆಮ್ಮು,ಶೀತ ದೂರವಾಗುತ್ತದೆ.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು :
ಉಪ್ಪಿನ ದ್ರಾವಣವು ಗಂಟಲಿನಲ್ಲಿ ಕ್ರಿಮಿಗಳು ಬೆಳೆಯದಂತೆ ತಡೆಯುತ್ತದೆ.ಒಂದು ಲೋಟ ಬಿಸಿ ನೀರಿಗೆ ಅರ್ಥ ಚಮಚದಷ್ಟು ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು.

ಹಬೆ ತೆಗೆದುಕೊಳ್ಳುವುದು :
ಕುದಿಯುವ ನೀರಿಗೆ ಎರಡರಿಂದ ಮೂರು ತುಳಸಿ ಎಲೆ ಅಥವಾ ಎರಡರಿಂದ ಮೂರು ಹನಿ ನೀಲಗಿರಿ ತೈಲವನ್ನು ಹಾಕಿ ಅದರ ಹಬೆಯನ್ನು ತೆಗೆದುಕೊಳ್ಳಿ. ಇದು ಸೈನಸ್ ರಂದ್ರವನ್ನು ತೆರೆಯುತ್ತದೆ. ಹಾಗೆ ಮೂಗಿನ ದಟ್ಟಣೆಯನ್ನು ಕಡಿಮೆ ಮಾಡಿ ನಿರರ್ಗಳವಾಗಿ ಉಸಿರಾಡಲು ಸಹಾಯ ಮಾಡುತ್ತದೆ.

ಬಿಸಿ ನೀರನ್ನು ಕುಡಿಯುತ್ತಿರಬೇಕು :
ಶೀತ,ಗಂಟಲು ಕೆರೆತ,ಕೆಮ್ಮು ಇದ್ದಾಗ ತಣ್ಣೀರು ಕುಡಿದರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ,ಬಿಸಿ ನೀರನ್ನು ಕುಡಿಯುವುದು ಉತ್ತಮ.ಬೇಕಿದ್ದರೆ ಸ್ವಲ್ಪ ನಿಂಬೆ ರಸವನ್ನು ಕೂಡ ಸೇರಿಸಬಹುದು.

ಮಳೆಗಾಲದಲ್ಲಿ ಮಾಡಬಾರದ/ನಿಷೇಧಿತ ಅಭ್ಯಾಸಗಳು :
ಫ್ಯಾನಿನ ಕೆಳಗೆ ಕೂರುವುದು
ಫ್ಯಾನ್ ಗಾಳಿ ನೆತ್ತಿಯ ಮೇಲೆ ಬಿದ್ದರೆ,ದೇಹ ತಂಪಾಗುತ್ತದೆ.ಇದರಿಂದ,ಶೀತ,ಮೂಗು ಬಂದ್ ಆಗುವುದು,ಗಂಟಲು ಕೆರೆತ ಹೆಚ್ಚಾಗುತ್ತದೆ.

ಎಣ್ಣೆ ಭರಿತ ಆಹಾರ ಹಾಗೂ ಶೀತ ಆಹಾರ ಸೇವನೆ :
ಫ್ರಿಜ್ ನಲ್ಲಿ ಇಟ್ಟು ನೀರು ಕುಡಿಯುವುದು,ತಂಪು ಪಾನೀಯ ಹಾಗೂ ಆಹಾರವನ್ನು ಸೇವಿಸುವುದು, ಎಣ್ಣೆಯಲ್ಲಿ ಕರೆದ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ.ಇದರಿಂದಾಗಿ,ಗಂಟಲು ಕಿರಿಕಿರಿಯಾಗಿ ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ.

ಬೆಳಿಗ್ಗೆ ಎದ್ದ ತಕ್ಷಣ/ತಡರಾತ್ರಿ ಸ್ನಾನ ಮಾಡುವುದು
ಹೀಗೆ ಮಾಡುವುದರಿಂದ ಶೀತ,ಸೈನಸ್ ರಂಧ್ರಗಳು ಮುಚ್ಚಿ ತಲೆನೋವು ಹೆಚ್ಚಾಗುತ್ತದೆ.ಸಾಧ್ಯ ಆದರೆ ಸ್ವಲ್ಪ ಬೆಳಕಿರುವಾಗಲೇ ಸ್ನಾನ ಮಾಡುವುದು ಉತ್ತಮ.

ಸ್ನಾನದ ಬಳಿಕ ತಲೆ ಸರಿ ಉಚ್ಚಿಕೊಳ್ಳದಿರುವುದು
ಒದ್ದೆ ತಲೆಯನ್ನು ಉಜ್ಜಿಕೊಳ್ಳದೆ ಹಾಗೇ ಬಿಡುವುದರಿಂದ ತಲೆಯಲ್ಲಿ ಫಂಗಲ್ ಇನ್ಫೆಕ್ಷನ್ ಆಗಿ ಹೊಟ್ಟು ಹೆಚ್ಚಾಗುತ್ತದೆ.ಜೊತೆಗೆ,ಶೀತ ಜ್ವರದಂತಹ ಲಕ್ಷಣಗಳು ಹೆಚ್ಚಾಗುತ್ತದೆ.ಹಾಗಾಗಿ,ಸ್ನಾನದ ಬಳಿಕ ತಲೆಯನ್ನು ಸರಿಯಾಗಿ ಉಜ್ಜಿ ಒಣಗಲು ಬಿಡಿ.ಬೇಕಿದ್ದರೆ,ಧೂಪದ ಹೊಗೆಯನ್ನು ಸಹ ನೀಡಬಹುದು.

ವಸಂತ ಋತುವಿನ ಬಿರು ಬಿಸಿಲಿಗೆ ತತ್ತರಿಸಿದ ಜನರಿಗೆ ಮುಂಗಾರು ಮಳೆ ಖುಷಿಕೊಟ್ಟರು ಕೂಡ,ಅದರಿಂದ ಆಗುವ ಕೆಲವೊಂದು ಋಣಾತ್ಮಕ ಪರಿಸ್ಥಿತಿಯನ್ನು ಅರಿಯಬೇಕು.ಇದನ್ನು ಗಮನದಲ್ಲಿರಿಸಿ ಈ ಬಾರಿಯ ಗ್ರೀಷ್ಮ ಋತುವನ್ನು ಆನಂದಿಸೋಣ.

ಡಾ ಗ್ರೀಷ್ಮಾ ಗೌಡ ಆರ್ನೋಜಿ
ವೈದ್ಯರು ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ