ಕುಕ್ಕುಜಡ್ಕ: ಚೊಕ್ಕಾಡಿ ಪ್ರೌಢಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಎಸ್. ಅಂಗಾರ ರಿಂದ ಚಾಲನೆ

0

ಸುವರ್ಣ ಸಂಭ್ರಮದ ಪೂರ್ವ ಭಾವಿಯಾಗಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ

“ವಿದ್ಯಾರ್ಥಿ ದಿಸೆಯಲ್ಲಿ
ವಿದ್ಯಾರ್ಜನೆಗೈದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ವಿದ್ಯಾರ್ಥಿಗಳು ತಾನು ಕಲಿತ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ನಮ್ಮ ಜನ್ಮದ ಋಣ ತೀರಿಸದಂತಾಗುವುದು ಎಂದು ಮಾಜಿ ಸಚಿವ ಎಸ್.ಅಂಗಾರ ರವರು ಹೇಳಿದರು.

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಸುವರ್ಣ ಮಹೋತ್ಸವದ ಪೂರ್ವ ಭಾವಿಯಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟುವಾಗಲೇ
ತಂದೆ -ತಾಯಿಯ ಋಣ ನಂತರ ವಿದ್ಯಾಭ್ಯಾಸ ಪಡೆಯಲು ಶಾಲೆಯ ಮತ್ತು ಗುರುಗಳ ಋಣ ಪ್ರತಿಯೊಬ್ಬನ ಮೇಲಿರುವುದು.ಅವಕಾಶ ಸಿಕ್ಕಾಗ ಋಣವನ್ನು ತೀರಿಸಿಕೊಂಡು ಕೃತಾರ್ಥರಾಗಬಹುದು. ಸುವರ್ಣಮಹೋತ್ಸವ ಶಾಶ್ವತ ಯೋಜನೆಯ ಮೂಲಕಆಚರಿಸುವಂತಾಗಬೇಕು ಇದಕ್ಕೆ ಪೂರಕವಾಗಿ ಎಲ್ಲಾ ಜನತೆ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಶಾಲಾ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ “ಶಾಲೆಯ ಸುವರ್ಣ ಮಹೋತ್ಸವದ ಆರಂಭಿಕ ಹಂತಕ್ಕೆ ಇಂದು ಚಾಲನೆ ನೀಡಲಾಗಿದೆ. ಇತಿಹಾಸವಿರುವ ಶಾಲೆಯಲ್ಲಿ ಸುಮಾರು 3.5 ಸಾವಿರಕ್ಕೂ ಮಿಕ್ಕಿ ಹಿರಿಯವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿರುವುದು ಹೆಮ್ಮೆಯ ವಿಚಾರ. ಶಿಕ್ಷಣ ಸಂಸ್ಥೆಯ ಆಗು ಹೋಗುಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಇಂತಹ ಜ್ಞಾನ ದೇಗುಲದಲ್ಲಿ ಸಕಲ ವ್ಯವಸ್ಥೆ ಕಲ್ಪಿಸುವ ಮೂಲಕ ಶಾಶ್ವತ ಯೋಜನೆಯನ್ನು ಹಮ್ಮಿಕೊಳ್ಳುವ ಚಿಂತನೆ ಇದೆ. ರಾಜ್ಯದಲ್ಲಿಯೇ ಮಾದರಿಶಾಲೆಯನ್ನಾಗಿಸುವ ಇರಾದೆ ನಮ್ಮದಾಗಿದೆ ಎಂದು ಪ್ರಸ್ತಾಪಿಸಿದರು.

ವೇದಿಕೆಯಲ್ಲಿ
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ,ಶಾಲಾಭಿವೃದ್ಧಿ ಮಂಡಳಿಕಾರ್ಯದರ್ಶಿ ತೇಜಸ್ವಿ ಕಡಪಳ, ಸ್ಪರ್ಧಾ ಸಮಿತಿ ಅಧ್ಯಕ್ಷ ಮಹೇಶ್ ಮೇರ್ಕಜೆ, ಶಾಲಾಮುಖ್ಯ ಶಿಕ್ಷಕ ಸಂಕೀರ್ಣ ಎ.ಎಲ್ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಚೈತ್ರಾ ಉಪಸ್ಥಿತರಿದ್ದರು. ಮಹೇಶ್ ಮೇರ್ಕಜೆ ಸ್ವಾಗತಿಸಿ,ಶಿಕ್ಷಕಿ ಚೈತ್ರಾ ವಂದಿಸಿದರು. ಸ.ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಅಧ್ಯಾಪಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದರು.