ಗ್ರಾಮಮಟ್ಟದಲ್ಲಿ ಹುಟ್ಟುವ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸಿದಾಗ ಕನ್ನಡ ಭಾಷಾ ಸಂಸ್ಕೃತಿ ಬೆಳೆಯಲು ಸಾಧ್ಯ: ಧನಂಜಯ ಕುಂಬ್ಳೆ
ವಿವಿಧ ಕ್ಷೇತ್ರಗಳ ಹನ್ನೊಂದು ಮಂದಿ ಸಾಧಕರಿಗೆ ಕನ್ನಡ ಕಸ್ತೂರಿ ಸನ್ಮಾನ ಪುರಸ್ಕಾರ
ಸುಳ್ಯದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಸಂಘಟಿಸಲಾಗಿದೆ. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ನಮ್ಮ ಜವಾಬ್ದಾರಿಯಾಗಿದೆ. ಗ್ರಾಮ ಮಟ್ಟದಲ್ಲಿ ಹುಟ್ಟಿಕೊಳ್ಳುವ ಕನ್ನಡದ ಬೇರುಗಳಿಗೆ ನೀರೆರೆದು ಪೋಷಿಸಿ ಗಟ್ಟಿಗೊಳಿಸಿ ಬೆಳೆಸಿದಾಗ ಕನ್ನಡದ ಚಿಂತನೆಗಳು ಹಾಗೂ ಭಾಷಾ ಸಂಸ್ಕೃತಿ ಬೆಳೆಯಲು ಸಾಧ್ಯವಿದೆ ಎಂದು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ ಅವರು ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕದ ವತಿಯಿಂದ ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸುಳ್ಯದಲ್ಲಿ ಚಂದ್ರಶೇಖರ ಪೇರಾಲುರವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗ್ರಾಮಮಟ್ಟದ ಶಾಲಾ -ಕಾಲೇಜುಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಶಾಲಾ ಹಂತದಲ್ಲಿ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಕನ್ನಡ ಮೊದಲ ಭಾಷೆಯಾಗಬೇಕು. ಸಮ್ಮೇಳನದ ನೆಪದಲ್ಲಿ ಕನ್ನಡದ ಮನಸ್ಸುಗಳು ಒಂದಾಗಲು ಸಾಧ್ಯವಿದೆ. ಆ ಮೂಲಕ ಕನ್ನಡದ ಬಗ್ಗೆ ಹೊಸ ಭರವಸೆಯನ್ನು ಸಾಹಿತ್ಯ ಸಮ್ಮೇಳನ ಮೂಡಿಸಿದೆ ಎಂದ ಧನಂಜಯ ಕುಂಬ್ಳೆ ಅವರು ಈ ಬಾರಿ ಮಹಿಳೆಯೊಬ್ಬರಿಗೆ ಸಮ್ಮೇಳನಾಧ್ಯಕ್ಷತೆಯನ್ನು ನೀಡಿ ಗೌರವಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುಳ್ಯ ತಾಲೂಕಿನ ಹನ್ನೊಂದು ಮಂದಿ ಸಾಧಕರಿಗೆ ಕನ್ನಡ ಕಸ್ತೂರಿ ಸನ್ಮಾನ ನೀಡಿ ಪುರಸ್ಕರಿಸಲಾಯಿತು.
ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಡಾ. ಶ್ವೇತಾ ಮಡಪ್ಪಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ತೆಕ್ಕುಂಜ, ಹಿರಿಯ ಲೆಕ್ಕಪರಿಶೋಧಕರ ಕ್ಷೇತ್ರದಲ್ಲಿ ಗಣೇಶ್ ಭಟ್, ಆಡಳಿತ/ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಲೀಲಾಧರ್ ಡಿ. ವಿ., ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಲೀಂ ಸುಳ್ಯ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೇಜೇಶ್ವರ ಕುಂದಲ್ಪಾಡಿ, ರಕ್ಷಣಾ ಸೇವೆ ಕ್ಷೇತ್ರದಲ್ಲಿ ಹುಕ್ರಪ್ಪ ಉಳುವಾರು, ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸರಸ್ವತಿ ಚಿದಾನಂದ ಅಡ್ತಲೆ, ಸಹಕಾರ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಕೆ.ಆರ್. ಪದ್ಮನಾಭ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆನಂದ ಕಲ್ಲುಗದ್ದೆ ಹಾಗೂ ಭೂತಾರಾಧನೆ ಕ್ಷೇತ್ರದಲ್ಲಿ ಕೇಶವ ಪರವ ಅವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಕನ್ನಡ ಕಸ್ತೂರಿ ಸನ್ಮಾನ ನೆರವೇರಿಸಿದರು.
ಬಳಿಕ ಮಾತನಾಡಿದ ಡಾ. ಕೆ.ವಿ.ಚಿದಾನಂದರು ತಾಲೂಕು ಮಟ್ಟದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ವತಿಯಿಂದ ಹಣ ಬಿಡುಗಡೆ ಮಾಡುವಂತೆ ಸಾಹಿತ್ಯ ಪರಿಷತ್ತು ಸರ್ಕಾರದ ಮೇಲೆ ಒತ್ತಡ ತರಬೇಕು. ಸರ್ಕಾರದ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿಗಾಗಿಯೇ ಒಂದು ಸಚಿವಾಲಯವಿದ್ದರೂ ಸಹ ಆರ್ಥಿಕವಾಗಿ ಸರ್ಕಾರ ಸಾಹಿತ್ಯ ಪರಿಷತ್ತನ್ನು ಪ್ರೋತ್ಸಾಹಿಸುತ್ತಿಲ್ಲ. ಸಾಹಿತಿಗಳು ಬೆಳೆಯಲು ಸರ್ಕಾರವೂ ಬೆಂಬಲಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಕೆ.ಆರ್. ಗಂಗಾಧರ ಹಾಗೂ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರು ಸನ್ಮಾನಿತರ ಪರಿಚಯ ಪಟ್ಟಿ ವಾಚಿಸಿದರು.
ವೇದಿಕೆಯಲ್ಲಿ ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಸಮ್ಮೇಳನಾಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಕಿರ್ಲಾಯ, ಅಬ್ದುಲ್ಲಾ ಅರಂತೋಡು, ಅರಂತೋಡು -ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಡ್ತಲೆ, ಸಲಹಾ ಸಮಿತಿ ಸದಸ್ಯ ರಾಮಚಂದ್ರ ಪಲ್ಲತ್ತಡ್ಕ, ಬಾಬು ಗೌಡ ಅಚ್ರಪ್ಪಾಡಿ, ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು. ಬಾಬು ಗೌಡ ಅಚ್ರಪ್ಪಾಡಿ ಅವರು ಸ್ವಾಗತಿಸಿ, ಕಿಶೋರ್ ಕುಮಾರ್ ಕಿರ್ಲಾಯ ಅವರು ವಂದಿಸಿದರು. ಶ್ರೀಮತಿ ಚಂದ್ರಮತಿ ಕೆ. ಅವರು ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದ ಬಳಿಕ ಸುಳ್ಯದ ರಂಗಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಅರೆಭಾಷೆ ಸಿರಿ ಸಂಸ್ಕೃತಿ ನೃತ್ಯರೂಪಕ ಹಾಗೂ ಮೈಸೂರಿನ ಧ್ವನಿ ಫೌಂಡೇಶನ್ ಸಂಸ್ಥೆಯ ಡಾ. ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವ – ಗಾನ – ಕನ್ನಡ ಗೀತೆಗಳ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.