ಬಹುಮುಖ ಪ್ರತಿಭೆಯಪ್ರಮೀಳಾ ರಾಜ್

0

ಪ್ರಮೀಳಾ ರಾಜ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದವರು. ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಸಾಹಿತ್ಯ ಮತ್ತು ಕಲಾ ಆಸಕ್ತರು.
ಕೆಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಭಾವಯಾನಿ ಎಂಬ ಕಾವ್ಯನಾಮದಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಭರವಸೆಯ ಕವಯತ್ರಿಯಾಗಿ ರೂಪುಗೊಳ್ಳುತ್ತಿರುವವರು. ವೃತ್ತಿಯಲ್ಲಿ ಶಿಕ್ಷಕಿಯಾಗಿ, ಪ್ರವೃತ್ತಿಯಲ್ಲಿ ಸಂಗೀತ ಹಾಗೂ ಸಾಹಿತ್ಯ ಕೃಷಿ ನಡೆಸುತ್ತಿರುವ ಇವರು ತಂದೆ ದಿ. ಶೀನ ಮತ್ತು ಲಲಿತಾ ಅವರ ಎರಡನೇ ಪುತ್ರಿ. ಪತಿ ರಾಜ್ ಅವರು ಬೆಂಗಳೂರಿನಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದಾರೆ. ದಿಶಾಂತ್ ರಾಜ್ ಎಂಬ ಓರ್ವ ಪುತ್ರನನ್ನು ಹೊಂದಿದ್ದು, ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ.
ಪದವೀಧರೆಯಾದ ಪ್ರಮೀಳಾ ರಾಜ್ ಮಂಗಳೂರಿನ ಸಂತ ಅನ್ನರ ಶಿಕ್ಷಕಿ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ತನ್ನ ಬಾಲ್ಯದ ಕನಸಿನನಂತೆ ಶಿಕ್ಷಕಿಯಾಗಿ ಆಯ್ಕೆಗೊಂಡು ಸುಳ್ಯ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆ ನಿಡುಬೆಯಲ್ಲಿ 15ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯದ ಕುರಿತಾಗಿ ಒಲವು ಬೆಳೆಸಿಕೊಂಡು ಬಿಡುವಿನ ಅವಧಿಯನ್ನೆಲ್ಲ ಪುಸ್ತಕಗಳ ಜೊತೆಗೆ ಕಳೆಯಲು ಇಚ್ಚಿಸುವ ಅಪ್ಪಟ ಕನ್ನಡಾಭಿಮಾನಿ ಅವರು. ಸೈನ್ಟ್ ಅನ್ಸ್
ಶಿಕ್ಷಕರ ತರಬೇತಿ ಸಂಸ್ಥೆಯ ಕನ್ನಡ ಉಪನ್ಯಾಸಕರು, ಕವಿಗಳು ಆಗಿರುವ ಶ್ರೀ ಉಮೇಶ್ ಕಾರಂತ್ ಅವರಿಂದ ಪ್ರಭಾವಿತಗೊಂಡು ಸಾಹಿತ್ಯದ ಕುರಿತಾಗಿ ತಮ್ಮ ಒಲವನ್ನು ಮುಂದುವರಿಸಿಕೊಂಡು, ಹಲವಾರು ಕನ್ನಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಬರಹಗಳ ಮೂಲಕ ಹಲವು ಹಿರಿಯ ಕವಿಗಳಿಂದ ಭೇಷ್ ಅನಿಸಿಕೊಂಡರು.ಇವರ ಬರಹಗಳು ಓದುಗರ ಹೃದಯ ತಟ್ಟುವಂತಿದ್ದು, ತನ್ನದೇ ಓದುಗ ಬಳಗವನ್ನು ಹೊಂದಿದ್ದಾರೆ. ನಮ್ಮ ಬಂಟ್ವಾಳ, ಸುಳ್ಯ ಸುದ್ದಿ ಪತ್ರಿಕೆ, ನಾಡಿನ ಸಮಾಚಾರ ದಿನ ಪತ್ರಿಕೆಯಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ,2018ರಲ್ಲಿ ತಮ್ಮ ಮೊದಲ ಕೃತಿ, ಸಂಗೀತ ನನ್ನೆದೆಯ ಭಾವಗಳ ಯಾನ ಎಂಬ ಕವನ ಸಂಕಲನ ಸುಳ್ಯ ದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಿಡುಗಡೆಯಾಯಿತು.ಎರಡನೇ ಕವನ ಸಂಕಲನ ಕೃತಿಯು ಮುದ್ರಣ ಹಂತದಲ್ಲಿದ್ದು ಕನ್ನಡದ ಪ್ರಸಿದ್ಧ ಲೇಖಕರಾಗಿರುವ ಪಿ. ವಿ ಪ್ರದೀಪ್ ಕುಮಾರ್ ಅವರ ಕಥಾಬಿಂದು ಪ್ರಕಾಶನದ ಅಡಿಯಲ್ಲಿ 2023ರ ಅಕ್ಟೋಬರ್ 29ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಸಾಹಿತ್ಯದ ಜೊತೆಗೆ ಸಂಗೀತ ಆಸಕ್ತರೂ ಆಗಿದ್ದು ಹಲವು ಕವಿಗಳ ರಚನೆಗೆ ಸ್ವತಃ ರಾಗ ಸಂಯೋಜನೆ ಮಾಡಿ, ಅದನ್ನು ತಾಲೂಕು, ಜಿಲ್ಲಾ ಹಂತದ ಸ್ಪರ್ಧೆಗಳಲ್ಲಿ ಹಾಡಿ ವಿಜೇತರಾಗಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಇವರ ಭಾವಗಾನ ಪ್ರಸಾರ ಆಗಿತ್ತು.

ತನ್ನ ಸಾಹಿತ್ಯದ ಸಾಧನೆಗಾಗಿ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿಯಿಂದ ರಾಜ್ಯಮಟ್ಟದ ಸಾಹಿತ್ಯ ವಿಭೂಷಣ ಪ್ರಶಸ್ತಿ, ಸ್ನೇಹ ಸಂಗಮ ಸಾಹಿತ್ಯ ವೇದಿಕೆಯಿಂದ ರಾಜ್ಯಮಟ್ಟದ ಸಾಹಿತ್ಯ ಸ್ಪೂರ್ತಿ ರತ್ನ ಪ್ರಶಸ್ತಿಗಳು ಲಭಿಸಿವೆ. ನಾಡಿನ ಸಮಾಚಾರ ದಿನಪತ್ರಿಕೆಯೆಲ್ಲಿ ಮೂರು ವರ್ಷಗಳಿಂದ ಇವರ ಬರಹಗಳು ಪ್ರಕಟವಾಗುತ್ತಿದ್ದು,
ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ್, ನಾಡಿನ ಸಮಾಚಾರ ಪತ್ರಿಕೆ ವತಿಯಿಂದ ದಿನಾಂಕ ಸೆಪ್ಟೆಂಬರ್ 24 ರಂದು ಬೆಳಗಾವಿಯಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ಪ್ರಮೀಳಾ ರಾಜ್ ಅವರ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿಯಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು