ಡಾ.ಕೇನಾಜೆ ನಿರ್ದೇಶನದ ತುಳು ಸಾಕ್ಷ್ಯಚಿತ್ರ ಅ.2ರಂದು ಬಿಡುಗಡೆ

0

ಜಾನಪದ ಸಂಶೋಧಕ, ಲೇಖಕ ಡಾ.ಸುಂದರ ಕೇನಾಜೆಯವರ ಚಿತ್ರಕತೆ ಹಾಗೂ ನಿರ್ದೇಶನದ ತುಳು ಸಾಕ್ಷ್ಯಚಿತ್ರ “ಪುರ್ಸ ಕಟ್ಟುನ: ಇನಿ- ಕೋಡೆ – ಎಲ್ಲೆ” ಇದರ ಬಿಡುಗಡೆ ಸಮಾರಂಭ ಅ 2 ರಂದು ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಇವರ ಸಹಕಾರದಿಂದ ಭರತೇಶ್ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿ ತಯಾರಿಸಿರುವ ಈ ಸಾಕ್ಷ್ಯಚಿತ್ರವು ಬೆಳ್ತಂಗಡಿ ಭಾಗದಲ್ಲಿ ಪ್ರಚಲಿತವಿರುವ ಪುರ್ಸ ಕಟ್ಟುನ ಕುಣಿತ ಹಾಗೂ ಸುಳ್ಯ ಪರಿಸರದಲ್ಲಿರುವ ಸಿದ್ದವೇಷ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ. ತುಳು ಸಂಶೋಧನಾತ್ಮಕ ನೆಲೆಯಲ್ಲಿ ತಯಾರಾಗಿರುವ ಈ ಸಾಕ್ಷ್ಯಚಿತ್ರ ಪುರ್ಸ ಕುಣಿತದ ಹಿನ್ನಲೆ, ಕುಣಿತದ ಸ್ವರೂಪ ಹಾಗೂ ವಿದ್ವಾಂಸರ ವಿಶ್ಲೇಷಣೆ ಹಾಗೂ ಇಂದಿನ ಸ್ಥಿತಿಗತಿಗಳನ್ನು ಒಳಗೊಂಡದ್ದಾಗಿದ್ದು ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರವಾಗಿ ಬಿಡುಗಡೆಗೊಳ್ಳಲಿದೆ. ಕಂದ್ರಪ್ಪಾಡಿ ಪುರುಷ ದೈವ, ಸುಳ್ಯದ ಗೌಡ ಜನಾಂಗ ಮತ್ತು ಮಲೆಕುಡಿಯ ಜನಾಂಗದ ಸಿದ್ಧವೇಷ ಹಾಗೂ ಮರಾಠಿ ಜನಾಂಗ ಬಾಲೆಸಾಂತು ಕುಣಿತವನ್ನು ತೌಲನಿಕವಾಗಿ ಈ ಸಾಕ್ಷ್ಯಚಿತ್ರದಲ್ಲಿ ಬಳಸಲಾಗಿದೆ.

ಮೈಸೂರಿನ ಕನ್ನಡಿ ಕ್ರಿಯೇಷನ್ ತಂಡ ಬೆಳ್ತಂಗಡಿ ಪರಿಸರದಲ್ಲಿ ಒಂದು ವಾರಗಳ ಕಾಲ ಚಿತ್ರೀಕರಣ ನಡೆಸಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಿರುತ್ತಾರೆ. ಕರಾವಳಿಯ ಹಿರಿಯ ವಿದ್ವಾಂಸರು, ಕುಣಿತದ ಕಲಾವಿದರು ಹಾಗೂ ವಿಭಿನ್ನ ಕುಣಿತಗಳನ್ನು ಒಳಗೊಂಡ ಈ ಸಾಕ್ಷ್ಯಚಿತ್ರ ಪುರ್ಸ ಕುಣಿತದ ಬಗ್ಗೆ ಅನೇಕ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದೆ. ಗುರು ಪ್ರಸಾದ್ ಸ್ವಾಮಿ ಹಿರೇಮಠ ಬೆಂಗಳೂರು ಮತ್ತು ತಂಡದ ಛಾಯಾಗ್ರಹಣ, ರಂಜಿತ್ ಸೇತು ಮೈಸೂರುರವರ ಸಂಕಲನ, ದೀಪು ನಾಯರ್ ಮೈಸೂರುರವರ ಸಂಗೀತ ಹಾಗೂ ಡಾ.ಗಿರೀಶರವರ ಇಂಗ್ಲೀಷ್ ಉಪಶೀರ್ಷಿಕೆ, ದಿನೇಶ್ ಕುಕ್ಕುಜಡ್ಕರ ರೇಖಾಚಿತ್ರಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.

ವಾಣಿ ಪದವಿ ಪೂರ್ವ ಕಾಲೇಜು‌, ಬೆಳ್ತಂಗಡಿ ಮತ್ತು ಸಿಐಎಸ್ ಎ2ಕೆ ಬೆಂಗಳೂರು ಈ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಈ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷರಾದ  ಪಿ. ಕುಶಾಲಪ್ಪ ಗೌಡ ಇವರು ವಹಿಸಲಿದ್ದಾರೆ. ಸಾಕ್ಷ್ಯಚಿತ್ರ ಬಿಡುಗಡೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬಯಿ ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ವಾಣಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ, ಎಸ್.ಡಿ.ಎಂ. ಕಾಲೇಜು ಉಜಿರೆ ಇಲ್ಲಿನ ಕನ್ನಡ ವಿಭಾಗದ ಸಹ  ಪ್ರಾಧ್ಯಾಪಕ ಡಾ.ದಿವಾಕರ ಕೊಕ್ಕಡ ಇವರು ಭಾಗವಹಿಸಲಿದ್ದಾರೆ. ಬಿಡುಗಡೆಗೊಂಡ ಬಳಿಕ ಈ ಸಾಕ್ಷ್ಯಚಿತ್ರ ವಿಕಿಮೀಡಿಯ ಮತ್ತು ಯೂಟ್ಯೂಬ್ ಗಳಲ್ಲಿ ಲಭ್ಯವಾಗಲಿದೆ. ಅಳಿದು ಹೋಗುತ್ತಿರುವ ಜಾನಪದ ವಿಷಯಗಳನ್ನು ಸಾಕ್ಷ್ಯಚಿತ್ರಗಳ ರೂಪದಲ್ಲಿ ಉಳಿಸುವ ಪ್ರಯತ್ನವಾಗಿ ಡಾ.ಸುಂದರ ಕೇನಾಜೆಯವರ ನಿರ್ದೇಶನದ ಆರನೇ ಸಾಕ್ಷ್ಯಚಿತ್ರ ಇದಾಗಿದೆ.