ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಣಯಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು, ಹಲವು ಬೇಡಿಕೆಗಳನ್ನು ಸರಕಾರದ ಮುಂದಿರಿಸಲಾಗಿದ್ದು ಇನ್ನು ಕೂಡಾ ಈಡೇರಿಕೆಯಾಗಿಲ್ಲ. ನಮ್ಮ ಬೇಡಿಕೆಗಳನ್ನು ಕರ್ನಾಟಕ ಸರಕಾರ ಹಾಗೂ ಕಲ್ಯಾಣ ಮಂಡಳಿ ಕೂಡಲೇ ಈಡೇರಿಸಬೇಕು.ಇಲ್ಲವಾದಲ್ಲಿ ಕಟ್ಟಡ ಕಾರ್ಮಿಕರ ವಿರೋಧವನ್ನೂ ಎದುರಿಬೇಕಾಗುತ್ತದೆ ಎಂದು ಬಿಎಂಎಸ್ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಸುಳ್ಯ ತಾಲೂಕು ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವ ಕುರಿತು ಹಲವು ಬಾರಿ ಮಂಡಳಿಯ ಉನ್ನತ ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ವಿವರಿಸಿ ಅವುಗಳನ್ನು ಶೀಘ್ರ ಪರಿಹರಿಸುವಂತೆ ವಿನಂತಿಸಲಾಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಚಿವರು ನೀಡಿರುವ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲದೆ ಕಾರ್ಮಿಕರ ಸೌಲಭ್ಯಗಳಲ್ಲಿ ಕಡಿತ ಮಾಡುವ ಬಗ್ಗೆ ಮಂಡಳಿಯ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವರು ತೀರ್ಮಾನಿಸಿರುವ ಕುರಿತು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದ್ದು,ಈ ರೀತಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ನಮ್ಮ ತೀವ್ರ ಆಕ್ಷೇಪವಿದೆ.
ನಾವು ಮುಂದಿರಿಸಿದ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ನಮ್ಮ ಸಂಘದಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಅಲ್ಲದೆ ನ್ಯಾಯಾಲಯದ ಮೊರೆ ಹೋಗುವುದೂ ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ, ನಾರಾಯಣ ಜಿ.ಎನ್., ಪ್ರ.ಕಾರ್ಯದರ್ಶಿ ಮಧುಸೂದನ ಸುಳ್ಯ, ಕೋಶಾಧಿಕಾರಿ ಮೋನಪ್ಪ ಜಯನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.