ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ, ಸಿಬ್ಬಂದಿಗೆ ಜೀವ ಬೆದರಿಕೆಯ ಆರೋಪ ಪ್ರಕರಣ

0

ಡಾ.ಕೆ.ವಿ. ಚಿದಾನಂದ ಸಹಿತ‌ 5 ಮಂದಿ ನ್ಯಾಯಾಲಯಕ್ಕೆ ಹಾಜರು : ಜಾಮೀನು ಮಂಜೂರು

ಸುಳ್ಯದ ಕುರುಂಜಿಭಾಗ್ ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ಟೋಬರ್ 5ರಂದು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಯವರನ್ನು ಬೆದರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಡಾ. ಕೆ.ವಿ.ಚಿದಾನಂದ ಸಹಿತ 5 ಮಂದಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅವರೆಲ್ಲರಿಗೂ ನ್ಯಾಯಾಲಯ‌ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.

ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ. ಜ್ಯೋತಿ ರೇಣುಕಾ ಪ್ರಸಾದ್ ರವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.5 ರಂದು ದೂರು ನೀಡಿ, ಬಾವ ಡಾ. ಕೆ ವಿ ಚಿದಾನಂದ, ಅವರ ಪತ್ನಿ ಶೋಭಾ ಚಿದಾನಂದ, ಮಗ ಅಕ್ಷಯ್ ಕೆ ಸಿ, ಮಗಳು ಡಾ. ಐಶ್ವರ್ಯ, ಸಂಬಂಧಿ ಹೇಮನಾಥ ಕೆ ವಿ, ಜಗದೀಶ್ ಅಡ್ತಲೆ ಮತ್ತು ಇತರ ಕೆಲವರು ಅಕ್ರಮ ಪ್ರವೇಶ ಮಾಡಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿದ್ದರಲ್ಲದೆ, ಮೊಬೈಲ್ ಕೇಳಿ ಪಡೆದು, ಸಿ.ಸಿ. ಕ್ಯಾಮರಾಗಳ ಮತ್ತು ಇತರ ಮಾಹಿತಿ ಪಡೆದು ಮೊಬೈಲ್ ಹಿಂತಿರುಗಿಸಿ, ಬೆದರಿಸಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಈ ದೂರಿನ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ ಕ್ರ : 115/ 2023 ಕಲಂ 448,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಸುಳ್ಯ ಹಿರಿಯ ನ್ಯಾಯಾಲಯಕ್ಕೆ ಹಾಜರಾದ ಡಾ. ಕೆ ವಿ ಚಿದಾನಂದ ಮತ್ತು ತಂಡದವರು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅವರಿಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದುಬಂದಿದೆ. ಡಾ.ಐಶ್ವರ್ಯ ರವರು ಇಂದು ಹಾಜರಾಗಲಿದ್ದು, ಜಾಮೀನು ಸಿಗಲಿದೆ ಎಂದು ತಿಳಿದುಬಂದಿದೆ.
ನ್ಯಾಯವಾದಿ ಭಾಸ್ಕರ್ ರಾವ್ ಕಕ್ಷಿದಾರರ ಪರವಾಗಿ ವಾದಿಸುತ್ತಿದ್ದಾರೆ.