ಮಲಬದ್ಧತೆ ಎನ್ನುವುದು ಬಹಳ ಸಂಕೀರ್ಣವಾದ ಮತ್ತು ಹೇಳಿಕೊಳ್ಳಲು ಮುಜುಗರವಾಗುವ ಕಾಯಿಲೆಯಾಗಿದ್ದು, ರೋಗಿಯು ಮಲ ವಿಸರ್ಜಿಸುವಾಗ ಬಹಳ ತೊಂದರೆಗೊಳಗಾಗುತ್ತಾನೆ. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆ ಇದಾಗಿದ್ದು, ಮಲದಲ್ಲಿನ ನೀರಿನ ಅಂಶ ಕಡಿಮೆಯಾಗಿ, ಮಲ ಗಟ್ಟಿಯಾಗಿ ಮಲ ವಿಸರ್ಜಿಸುವುದು ಬಹಳ ಯಾತನಾಮಯವಾಗಿರುತ್ತದೆ. ಜೀರ್ಣಾಂಗ ಮಾರ್ಗದಲ್ಲಿ ಆಹಾರದ ಚಲನೆ ನಿಧಾನವಾಗಿದ್ದಲ್ಲಿ, ದೊಡ್ಡ ಕರುಳಿನಲ್ಲಿ ಆಹಾರದಲ್ಲಿನ ನೀರಿನ ಅಂಶ ಜಾಸ್ತಿ ಹೀರಿಕೊಳ್ಳಲ್ಪಡುತ್ತದೆ ಮತ್ತು ಮಲದಲ್ಲಿನ ನೀರಿನ ಅಂಶ ಕಡಿಮೆಯಾಗಿ, ಮಲ ಗಟ್ಟಿಯಾಗುತ್ತದೆ. ಇದರಿಂದಾಗಿ ಮಲ ವಿಸರ್ಜಿಸುವಾಗ ಬಹಳ ನೋವು ಉಂಟಾಗುತ್ತದೆ ಮತ್ತು ಕೆಲವೊಮ್ಮೆ ರಕ್ತ ಸ್ರಾವಕ್ಕೂ ಕಾರಣವಾಗುತ್ತದೆ. ವಾರದಲ್ಲಿ ಮೂರಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆ ಮಾಡುವವರಲ್ಲಿ ಮಲಬದ್ದತೆ ಇದೆ ಎಂದು ಸಾಮಾನ್ಯವಾಗಿ ತಿಳಿದುಕೊಳ್ಳಲಾಗುತ್ತದೆ. ಆಮೇರಿಕಾದ ಜನ ಸಂಖ್ಯೆಯ 20 ಶೇಕಡಾ ಮಂದಿ ಈ ಸಮಸ್ಯೆಯಿಂದ ಬಳಲುತ್ತಾರೆ ಮತ್ತು ವರ್ಷವೊಂದರಲ್ಲಿ 8 ಮಿಲಿಯನ್ ಮಂದಿ ಕೇವಲ ಮಲಬದ್ಧತೆಯ ಕಾರಣಕ್ಕಾಗಿಯೇ ವೈದ್ಯರ ಬಳಿ ಚಿಕಿತ್ಸೆಗೆ ಬರುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಕಾರಣಗಳೇನು?
- ಆಹಾರದಲ್ಲಿ ನಾರಿನಂಶ ಕಡಿಮೆಯಾದಾಗ ಮಲಬದ್ಧತೆ ಹೆಚ್ಚಾಗುತ್ತದೆ. ನಾರಿನಂಶ ಸ್ನಾಯುಗಳ ಮೇಲೆ ಒತ್ತಡ ಹೇರಿ ಕರುಳಿನ ಚಲನೆಗೆ ಪ್ರಚೋದಿಸುತ್ತದೆ. ಜಾಸ್ತಿ ನಾರು ಇರುವ ಹಣ್ಣು, ತರಕಾರಿ ಸೇವನೆ ಅತೀ ಅಗತ್ಯ. ನಾರಿನಂಶ ಕಡಿಮೆ ಇರುವ ಚೀಸ್, ಮಾಂಸ ಮತ್ತು ಮೊಟ್ಟೆಗಳನ್ನು ಮಲಬದ್ಧತೆ ಇರುವವರು ಬಳಸುವುದನ್ನು ನಿಯಂತ್ರಿಸಬೇಕು.
- ದೈಹಿಕ ಚಲನೆ ಅಥವಾ ವ್ಯಾಯಮ ಕಡಿಮೆಯಾದಲ್ಲಿ ಕರುಳಿನ ಸ್ನಾಯುಗಳ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ವಯಸ್ಕರಲ್ಲಿ, ಬಹಳ ದಿನಗಳ ಕಾಲ ಹಾಸಿಗೆ ಹಿಡಿದಿದ್ದಲ್ಲಿ, ಮತ್ತು ಅಂಗವಿಕಲತೆಯಿಂದ ಚಲನೆ ಕುಂಠಿತವಾದಲ್ಲಿ ಮಲಬದ್ಧತೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೈಹಿಕ ಚಲನೆ ಮತ್ತು ಪರಿಶ್ರಮ ಜಾಸ್ತಿಯಾದಂತೆ ದೇಹದ ಮೂಲ ಪಚನಾ ಕ್ರಿಯೆಯ ವೇಗ ಜಾಸ್ತಿಯಾಗಿ, ಮಲಬದ್ಧತೆ ಸಾಧ್ಯತೆ ಕ್ಷೀಣಿಸುತ್ತದೆ. ವಯಸ್ಕರಲ್ಲಿ ದೈಹಿಕ ಚಲನೆ ಕಡಿಮೆ ಇರುತ್ತದೆ. ಮತ್ತು ಕ್ರೀಯಾಶೀಲತೆಯೂ ಕುಂಠಿತವಾಗಿ, ಮಲಬದ್ಧತೆ ಸಾಧ್ಯತೆ ಹೆಚ್ಚು.
- ಔಷಧಿ:- ಕೆಲವೊಂದು ಔಷಧಿಗಳ ಅಡ್ಡ ಪರಿಣಾಮದಿಂದಾಗಿಯೂ ಮಲಬದ್ಧತೆ ಉಂಟಾಗುತ್ತದೆ. ನೋವು ನಿವಾರಕ ಔಷಧಿಗಳಾದ ಕೊಡೈನ್, ಮಾರ್ಪಿನ್, ಖಿನ್ನತೆಗಾಗಿ ಬಳಸುವ ಅಮಿಟ್ರಿಪ್ಟಲಿನ್, ಇಮಿಪ್ರಮೈನ್, ಅಪಸ್ಮಾರ ತಡೆಯಲು ಬಳಸುವ ಕಾರ್ಬಮಜಪೈನ್, ಪೀನ್ಯಾಟಾಯಿನ್, ರಕ್ತಹೀನತೆ ಇರುವವರಲ್ಲಿ ಬಳಸುವ ಕಬ್ಬಿನದ ಅಂಶ ಜಾಸ್ತಿಮಾಡುವ ಫೇರಸ್ ಸಂಕೀರ್ಣ ಔಷಧಿಗಳು, ಅಲ್ಯೂಮಿನಿಯಮ್ ಹೊಂದಿರುವ ಆಂಟಾಸಿಡ್ ಔಷಧಿಗಳು, ಅಧಿಕÀ ರಕ್ತದೊತ್ತಡ ನಿಯಂತ್ರಣಕ್ಕೆ ಬಳಸುವ ಔಷಧಿಗಳಾದ ನಿಫೆಡಿಪೈನ್, ಕ್ಲೊರೋಥಯಜೈಡ್ ಮುತಾಂತರ ಔಷಧಿಗಳು ಮಲಬದ್ಧತೆಗೆ ಕಾರಣವಾಗುತ್ತದೆ.
- ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿಯಾದ ಬಳಕೆಯಿಂದಲೂ ಮಲಬದ್ಧತೆ ಉಂಟಾಗಬಹುದು.
- ಕರುಳು ಕೆರಳುವ ಖಾಯಿಲೆ ಇರುವವರಿಗೂ ಮಲಬದ್ಧತೆ ಬರಬಹುದು.
- ಗರ್ಭಿಣಿಯರಲ್ಲಿ, ರಸದೂತಗಳ ಏರಿಳಿತದಿಂದಾಗಿ ಕರುಳಿನಲ್ಲಿ ಆಹಾರದ ಚಲನೆಯಲ್ಲಿ ವ್ಯತ್ಯಾಸವಾಗಿ ಮಲಬದ್ಧತೆ ಬರಬಹುದು. ಅದೇ ರೀತಿ ಗರ್ಭಕೋಶದಲ್ಲಿ ಭ್ರೂಣ, ಕರುಳಿನ ಮೇಲೆ ಒತ್ತಡ ಹಾಕಿ , ಆಹಾರದ ಚಲನೆಗೆ ಅಡ್ಡಿಯಾಗಿ ಮಲಬದ್ಧತೆಗೆ ಕಾರಣವಗಬಹುದು.
- ಜೀವನ ಶೈಲಿಯ ಬದಲಾವಣೆ, ಆಹಾರದಲ್ಲಿ ವ್ಯತ್ಯಾಸ, ದೈನಂದಿನ ದಿನಚರಿಯಲ್ಲಿನ ಬದಲಾವಣೆ, ಪ್ರವಾಸದ ಸಮಯದಲ್ಲಿ ಆಹಾರ ಪದ್ಧತಿ ವ್ಯತ್ಯಾಸವಾಗಿ, ಮಲಬದ್ಧತೆಗೆ ಕಾರಣವಾಗುತ್ತದೆ.
- ಅತಿಯಾದ ‘ಲಾಕ್ಸೇಟಿವ್’ ಎಂಬ ಔಷಧಿಯನ್ನೂ ಬಳಸಿ ಮಲವಿಸರ್ಜಸುವ ಅಭ್ಯಾಸ ಮಾಡಿಕೊಂಡಲ್ಲಿ ಕ್ರಮೇಣ ದೇಹ ಅದಕ್ಕೆ ಒಗ್ಗಿ ಹೋಗಿ, ಬಳಿಕ ಅದಿಲ್ಲದೆ ಮಲ ವಿಸರ್ಜಿಸಲು ಸಾಧ್ಯವಾಗದೆ ಇರಬಹುದು ಮತ್ತು ಮಲಬದ್ಧತೆ ಉಂಟಾಗಬಹುದು.
- ಸರಿಯಾಗಿ ನೀರು ಸೇವಿಸಿದಲ್ಲಿ ಮಲಬದ್ಧತೆ ಸಾಧ್ಯತೆ ಕಡಿಮೆ. ಮಲಬದ್ಧತೆ ಇರುವವರಲ್ಲಿ ಜಾಸ್ತಿ ನೀರು ಕುಡಿದಾಗ ವಿಶೇಷ ಪ್ರಯೋಜನವಾಗುವುದು. ಇಂಗಾಲಯುಕ್ತ ಸೋಡ, ಕೋಕ್ ಪೆಪ್ಸಿ ಮುಂತಾದ ಪಾನೀಯಗಳು ಅಥವಾ ಕೆಫೆನ್‍ಯುಕ್ತ ಕಾಫಿ, ಟೀ ಜಾಸ್ತಿ ಕುಡಿದಲ್ಲಿ ದೇಹದಲ್ಲಿ ನಿರ್ಜಲಿಕರಣವಾಗಿ ಮಲಬದ್ಧತೆ ಸಮಸ್ಯೆ ಉಲ್ಬಣವಾಗಬಹುದು. ಅದೇ ರೀತಿ ಆಲ್ಕೋಹಾಲ್ ಸೇವನೆ ಕೂಡಾ ಮಲಬದ್ಧತೆಯನ್ನು ಮತ್ತಷ್ಟು ಕೆರಳಿಸಬಹುದು.
- ದೊಡ್ಡ ಕರುಳ ಮತ್ತು ಗುಧದ್ವಾರದಲ್ಲಿನ ಗಡ್ಡೆಗಳು, ಅಥವಾ ಇನ್ನಾವುದೇ ತೊಂದರೆಗಳು, ಮಲ ವಿಸರ್ಜನೆಗೆ ಅಡ್ಡಿ ಮಾಡಿ ಮಲಬದ್ಧತೆಗೆ ಕಾರಣವಾಗಬಹುದು.
- ಕೆಲವೊಂದು ನರಕ್ಕೆ ಸಂಬಧಿಸಿದ ರೋಗಗಳಾದ ಮಲ್ಟಿಪಲ್, ಸ್ಲಿರೋಸಿನ್, ಪಾಕೀಸ್‍ಸನ್ಸ್ ರೋಗ, ಲಕ್ವ, ಬೆನ್ನಹುರಿ ಅಘಾತ, ಮುಂತಾದವುಗಳಿಂದಲೂ ಮಲಬದ್ಧತೆ ಬರುತ್ತದೆ. ರಸದೂತಗಳಿಗೆ ಸಂಬಧಿಸಿದ ಮಧುಮೇಹ, ಹೈಪೋಥೈರಾಯಿಡಿಸಮ್, ಯರೇಮಿಯಾ ರೋಗಳಿಂದಲೂ ಮಲಬದ್ಧತೆ ಬರಬಹುದು.
ಚಿಕಿತ್ಸೆ ಹೇಗೆ?
- ಜೀವನ ಶೈಲಿಯಲ್ಲಿ ಬದಲಾವಣೆ ದೈಹಿಕ ಪರಿಶ್ರಮವಿರುವ ಕ್ರಿಯಾಶೀಲ ಜೀವನಶೈಲಿ ಅಳವಡಿಸಿಕೊಳ್ಳಿ. ಆಹಾರ ಪದ್ಧತಿಯಲ್ಲಿ ಬದಲಾವಣೆ, ಮಾಡಿ ಜಾಸ್ತಿ ನೀರು ಸೇವನೆ, ನಾರುಯುಕ್ತ ಆಹಾರ, ಹಸಿ ತರಕಾರಿ, ಹಣ್ಣು ಸೇವನೆ ಮಾಡಬೇಕು. ಕಾಲ ಕಾಲಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ, ಬ್ರೆಡ್, ಬಿಸ್ಕಟ್ಟು, ಬೇಕರಿ ತಿಂಡಿ, ಮಸಾಲೆಯುಕ್ತ ಕರಿದ ತಿಂಡಿ, ಡೈರಿ ಉತ್ಪನ್ನಗಳನ್ನು ಕಡಿಮೆ ಬಳಸಬೇಕು.
- ದೈನಂದಿನ ಜೀವನದಲ್ಲಿ ಕ್ರಿಯಾಶೀಲ ಚಟುವಟಿಕೆಗಳಿಗೆ ಹೆಚ್ಚು ಆಸ್ಪದ ನೀಡುವುದು. ಮದ್ಯಪಾನ, ಧೂಮಪಾನ ವರ್ಜಿಸಬೇಕು, ಮಾನಸಿಕ ಒತ್ತಡಗಳನ್ನು ಸಮರ್ಪಕವಾಗಿ ನಿರ್ವಹಿಸತಕ್ಕದ್ದು. ದೇಹದಲ್ಲಿನ ರಸದೂತಗÀಳ ಏರುಪೇರು ಆಗದ ರೀತಿಯಲ್ಲಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳತಕ್ಕದ್ದು.
- ಮಲಬದ್ಧತೆ ನಿವಾರಿಸುವ ಲಾಕ್ಸೇಟಿವ್ ಔಷಧಿಯನ್ನು ಅತಿ ಜಾಗರೂಕತೆಯಿಂದ ಬಳಸಬೇಕು. “ಅತಿಯಾಗಿ ಬಳಸಿದಲ್ಲಿ ಅಮೃತವೂ ವಿಷ” ಎಂಬ ಮಾತಿನಂತೆ ಅತಿಯಾದ ಲಾಕ್ಸೇಟಿವ್ ಬಳಕೆಯಿಂದ ಮಲಬದ್ಧತೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆಯೂ ಇದೆ.
- ಕರುಳಿನ ಸ್ನಾಯುಗಳ ವೇಗ ಹೆಚ್ಚಿಸುವ ಔಷಧಿಗಳು, ಮಲದ ಸಾಂದ್ರತೆಯನ್ನು ಕಡಿಮೆಯಾಗಿಸುವ ಔಷಧಿಗಳು, ಮಲದಲ್ಲಿ ನಾರಿನಂಶ ಜಾಸ್ತಿಯಾಗಿಸುವ ಆಹಾರ ಪದಾರ್ಥಗಳು ಹೀಗೆ ಬೇರೆ ಬೇರೆ ಔಷಧಿಗಳು ಲಭ್ಯವಿದ್ದು ವೈದ್ಯರ ಸಲಹೆಯಂತೆ ಬಳಸತಕ್ಕದ್ದು.
ನೈಸರ್ಗಿಕವಾಗಿ ಮಲಬದ್ಧತೆ ತಡೆಗಟ್ಟುವ ವಿಧಾನಗಳು
- ಆಹಾರದಲ್ಲಿ ದಿನವೊಂದರಲ್ಲಿ 18ರಿಂದ 30 ಗ್ರಾಂನಷ್ಟು ನಾರಿನಂಶ ಇರುವಂತೆ ನೋಡಿಕೊಳ್ಳಬೇಕು ನಾರಿನಂಶ ಜಾಸ್ತಿ ಇರುವ ಸುವರ್ಣಗಡ್ಡೆ, ಬೀನ್ಸ್, ಬೆಂಡೆಕಾಯಿ, ಸೌತೆಕಾಯಿ, ಮೂಲಂಗಿ, ಬಾಳೆದಿಂಡು ಮುಂತಾದ ಆಹಾರ ಸೇವಿಸಬೇಕು.
- ಆಹಾರದ ಗಾತ್ರವನ್ನು ಹಿಗ್ಗಿಸುವ ವಸ್ತುಗಳನ್ನು ಜಾಸ್ತಿ ಬಳಸಬೇಡಿ. ಜಾಸ್ತಿ ನೀರು ಸೇವಿಸಿದಾಗ, ಆಹಾರದಿಂದ ನೀರಿನಂಶ ಹೀರುವಿಕೆ ಕಡಿಮೆಯಾಗುತ್ತದೆ.
- ದೇಹಬಾಧೆ ತೀರಿಸಬೇಕು ಎಂದ ಬಯಕೆ ಬಂದಾಗೆಲ್ಲ ಶೌಚಾಲಯಕ್ಕೆ ಹೋಗಿ ಮಲವಿಸರ್ಜನೆ ಮಾಡಬೇಕು. ಮಲವನ್ನು ಹಿಡಿದಿಟ್ಟುಕೊಂಡಲ್ಲಿ ಮಲಬದ್ಧತೆಗೆ ಪರೋಕ್ಷವಾಗಿ ಕಾರಣವಾಗುತ್ತದೆ.
- ಮಲವಿಸರ್ಜನೆ ಮಾಡುವಾಗ ನಿಮ್ಮ ಮೊಣಕಾಲು ಸೊಂಟದಿಂದ ಮೇಲೆ ಇರುವಂತೆ ನೋಡಿಕೊಳ್ಳಿ. ಹೀಗೆ ಮಾಡಿದರೆ ಸರಾಗವಾಗಿ ಮಲವಿಸರ್ಜಿಸಲ್ಪಟ್ಟು ಮಲಬದ್ಧತೆ ಉಂಟಾಗುವುದಿಲ್ಲ.
- ನಿರಂತವಾದ ದೈಹಿಕ ವ್ಯಾಯಾಮ, ದೈಹಿಕ ದುಡಿಮೆಯಿಂದ ಕರುಳಿನ ಸ್ನಾಯುಗಳು ಕ್ರಿಯಾಶೀಲವಾಗಿ ಮಲಬದ್ಧತೆ ಉಂಟಾಗುವುದಿಲ್ಲ.
ಕೊನೆ ಮಾತು
ಮಲಬದ್ಧತೆ ಎನ್ನುವುದು ದೀರ್ಘಕಾಲಿಕ ಮತ್ತು ಹೇಳಿಕೊಳ್ಳಲಾಗದ ಸಮಸ್ಯೆಯಾಗಿದ್ದು ಹೆಚ್ಚಿನ ರೋಗಿಗಳು ಯಾರಿಗೂ ತಿಳಿಸದೆ ಸುಮ್ಮನ್ನಿರುತ್ತಾರೆ. ಹೀಗೆ ಮಾಡಿದಲ್ಲಿ ಗುಧದ್ವಾರದಲ್ಲಿ ಬಿರುಕು ಉಂಟಾಗಿ ಮಲವಿಸರ್ಜನೆ ಮಾಡುವಾಗ ರಕ್ತಸ್ರಾವವಾಗಬಹುದು ಮತ್ತು ರಕ್ತಹೀನತೆಗೆ ಕಾರಣವಾಗುತ್ತದೆ. ಅದರಲ್ಲಿಯೆ ಬಹಳ ಸಮಯ ಹಾಗೆ ಮುಂದುವರಿದಲ್ಲಿ ‘ಮೂಲವ್ಯಾದಿ’ ರೋಗಕ್ಕೆ ಕಾರಣವಾಗುತ್ತದೆ. ಇದನ್ನು ಅಂಗ್ಲಭಾಷೆಯಲ್ಲಿ ಫೈಲ್ಸ್ ಅಥವಾ ಹೆಮರಾಯ್ಡ್ ಎನುತ್ತಾರೆ. ಒಟ್ಟಿನಲ್ಲಿ ಅಧುನಿಕತೆ ನಮ್ಮ ಜೀವನದಲ್ಲಿ ವ್ಯಾಪಿಸಿದಂತೆ, ಮನುಷ್ಯ ಹೆಚ್ಚು ಆಲಸಿಯಾಗಿ, ಹೊಸ ಹೊಸ ರೋಗಗಳು ಬೆನ್ನುಹತ್ತುತ್ತದೆ. ಮಲಬದ್ಧತೆ ಮತ್ತು ಮೂಲ್ಯವ್ಯಾಧಿ ಇದೇ ಪಂಗಡಕ್ಕೆ ಸೇರಿದ ಖಾಯಿಲೆಯಾಗಿದ್ದು, ಮನುಷ್ಯನನ್ನು ಶಾಶ್ವತವಾಗಿ ರೋಗಿಗಳನ್ನಾಗಿ ಮಾಡಿ ಬಿಡುತ್ತದೆ. ನಾವು ಸಕಾಲದಲ್ಲಿ, ಎಚ್ಚೆತ್ತು ಆರೋಗ್ಯಕರ ಜೀವನಶೈಲಿ ಆಳವಡಿಸಿ, ಆಹಾರದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಂಡಲಿ,್ಲ ಇಂತಹ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಡಾ| ಮುರಲೀ ಮೋಹನ್ ಚೂಂತಾರು