ಒಂದೂವರೆ ತಿಂಗಳಾದರೂ ಬಾರದ ಅಕ್ರಮ ಸಕ್ರಮ ಸದಸ್ಯರ ಪಟ್ಟಿ

0

ಕಾಂಗ್ರೆಸ್‌ನಿಂದ ಎರಡು ಪಟ್ಟಿ ಸಲ್ಲಿಕೆ: ಗೀತಾ ಕೋಲ್ಚಾರ್, ಪಿ.ಪಿ.ವರ್ಗಿಸ್, ಆದಂ ಕಡಬ, ದಿನೇಶ್ ಅಂಬೆಕಲ್ಲು, ಬಾಲಕೃಷ್ಣ ಬಳ್ಳೇರಿ, ಸತ್ಯಕುಮಾರ್ ಆಡಿಂಜ, ಪವಿತ್ರ ಕುದ್ವ ಹೆಸರು

ಕಾಂಗ್ರೆಸ್ ಪಕ್ಷದ ವತಿಯಿಂದ ಸದಸ್ಯರ ಹೆಸರು ಸಲ್ಲಿಕೆಯಲ್ಲಾದ ವಿಳಂಬದಿಂದಾಗಿ, ಬಿಜೆಪಿ ಶಾಸಕರು ಸಲ್ಲಿಸಿದ ಪಟ್ಟಿ ಮಂಜೂರಾಗಿ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಕಾರ್ಯಕರ್ತರ ನೇಮಕವಾಗಿ ಆದೇಶ ಸಿದ್ಧಗೊಂಡ ಘಟನೆ ನಡೆದು ಒಂದೂವರೆ ತಿಂಗಳಾದರೂ ಸುಳ್ಯ ವಿಧಾನಸಭಾ ಕ್ಷೇತ್ರದ ಸಕ್ರಮ ಸಕ್ರಮ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕವಾಗಿಲ್ಲ. ಕಾಂಗ್ರೆಸ್ ನಿಂದ ಎರಡು ಪಟ್ಟಿಗಳು ಸರಕಾರಕ್ಕೆ ಸಲ್ಲಿಕೆಯಾಗಿರುವುದರಿಂದ ವಿವಾದ ಇತ್ಯರ್ಥಗೊಳಿಸಿ ಒಮ್ಮತದ ಸದಸ್ಯರನ್ನು ನೇಮಕಗೊಳಿಸಲು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.


ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಕೆಡೆಂಜಿ ರಾಕೇಶ್ ರೈ, ಭಾರತಿ ಉಳುವಾರು ಮತ್ತು ಜಗದೀಶ್ ಡಿ.ಪಿ. ಯವರನ್ನು ನೇಮಿಸಿ ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯ ಸಮಿತಿ ಸೆ.೧೨ರಂದು ಆದೇಶವಾಗಿತ್ತು. ಈ ಆದೇಶ ತಾಲೂಕು ಕಚೇರಿಗೆ ತಲುಪುವ ಮೊದಲೇ ಸೆ.೧೩ರಂದು ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದ್ದಿಯಾದಾಗ ಎಚ್ಚೆತ್ತುಕೊಂಡ ಕಾಂಗ್ರೆಸ್ಸಿಗರು ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರ ಮೂಲಕ ಆ ಆದೇಶವನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದಾಗಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಹೊಸ ಸದಸ್ಯರ ನೇಮಕವಾಗಿಲ್ಲ.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸುಳ್ಯ ಮತ್ತು ಕಡಬ ಎರಡು ಬ್ಲಾಕ್ ಕಾಂಗ್ರೆಸ್ ಘಟಕಗಳಿದ್ದು ಅವೆರಡೂ ಒಮ್ಮತದಿಂದ ಸದಸ್ಯರನ್ನು ಆರಿಸಬೇಕಾಗಿದೆ.


ಸುಳ್ಯ ಬ್ಲಾಕ್ ನಿಂದ ಕೊಟ್ಟ ಪಟ್ಟಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಮಾಜಿ ನ.ಪಂ. ಸದಸ್ಯ ದಿನೇಶ್ ಅಂಬೆಕಲ್ಲು ಮತ್ತು ಕಡಬ ಭಾಗದವರಾಗಿರುವ ಕೃಷ್ಣಪ್ಪರ ಆಪ್ತ ಆದಂ ಎಂಬವರ ಹೆಸರುಗಳಿದ್ದಾವೆಂದೂ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಡಿದ ಪಟ್ಟಿಯಲ್ಲಿ ಮಾಜಿ ಜಿ.ಪಂ. ಸದಸ್ಯ ಪಿ.ಪಿ. ವರ್ಗಿಸ್‌ರವರ ಹೆಸರು ಇರುವುದಾಗಿಯೂ, ಡಾ| ರಘುರವರ ಮೂಲಕ ರಮಾನಾಥ ರೈಯವರಿಗೆ ಹೋಗಿ ಅಲ್ಲಿಂದ ಸರಕಾರಕ್ಕೆ ಶಿಫಾರಸಾದವರ ಪಟ್ಟಿಯಲ್ಲಿ ಸತ್ಯಕುಮಾರ್ ಆಡಿಂಜ, ಪವಿತ್ರ ಕುದ್ವ, ಬಾಲಕೃಷ್ಣ ಬಳ್ಳೇರಿಯವರು ಹೆಸರಿರುವುದಾಗಿಯೂ ಹೇಳಲಾಗಿದೆ.


ಈ ವಿವಾದ ಇತ್ಯರ್ಥಕ್ಕೆ ಡಿ.ಕೆ.ಶಿವಕುಮಾರ್ ರವರು ಸೂತ್ರವೊಂದನ್ನು ಮುಂದಿಟ್ಟಿದ್ದು, ಸುಳ್ಯ ಬ್ಲಾಕ್ ಅಧ್ಯಕ್ಷರು ಸೂಚಿಸಿದ ಒಬ್ಬರು, ಕಡಬ ಬ್ಲಾಕ್ ಅಧ್ಯಕ್ಷರು ಸೂಚಿಸಿದ ಒಬ್ಬರು ಹಾಗೂ ಜಿ.ಕೃಷ್ಣಪ್ಪರು ಸೂಚಿಸಿದ ಒಬ್ಬರನ್ನು ಸದಸ್ಯರಾಗಿಸಲು ಹೇಳಿದ್ದಾರೆಂದು ಗೊತ್ತಾಗಿದೆ. ಅದರಂತೆ ಗೀತಾ ಕೋಲ್ಚಾರ್, ಪಿ.ಪಿ. ವರ್ಗಿಸ್ ಹಾಗೂ ಆದಂ ರವರು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.