ಮೇಲ್ಭಾಗದಲ್ಲಿರುವ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳಿಗೆ ತಾತ್ಕಾಲಿಕ ತರಗತಿ
ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸಿ ಸ್ತ್ರೀ ಶಕ್ತಿ ಸಂಘ, ಬಾಲವಿಕಾಸ ಸಮಿತಿ ಹಾಗೂ ಊರವರ ಮುಖಾಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಮೂಲಕ ಮನವಿ ನೀಡಲಾಯಿತು. ಸೋಣಂಗೇರಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಗೆ ಹೊಂದಿಕೊಂಡಿರುವ ಸುಳ್ಯ-ಸೋಣಂಗೇರಿ ಮುಖ್ಯ ರಸ್ತೆಯ ಬದಿಯಲ್ಲಿ ಅಂಗನವಾಡಿ ಪಕ್ಕದಲ್ಲೇ ನೂತನ ವೃತ್ತದ ನಿರ್ಮಾಣವು ಆಗಿದ್ದು, ಅಂಗನವಾಡಿಯು ನಾಲ್ಕು ಭಾಗಗಳಿಂದಲೂ ಮಣ್ಣು ತುಂಬಿ ಎತ್ತರಿಸಲ್ಲಟ್ಟಿದ್ದು, ಗುಂಡಿಯಲ್ಲಿ ಅಂಗನವಾಡಿ ಕಟ್ಟಡವನ್ನು ತಳ್ಳಿದಂತಾಗಿದೆ. ಹಾಗಾಗಿ ಮೇಲ್ಭಾದಲ್ಲಿರುವ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳಿಗೆ ತಾತ್ಕಾಲಿಕ ತರಗತಿ ನಡೆಸಲಾಗುತ್ತಿದೆ. ಈ ರೀತಿಯ ವ್ಯವಸ್ಥೆಯಿಂದ ಮಕ್ಕಳಿಗೆ ಆಟ ಆಡಲು, ಸ್ತ್ರೀ ಶಕ್ತಿ ಸಂಘಗಳ ಸಭೆಗಳು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಸ್ಥಳದ ಕೊರತೆಯಾಗಿರುವುದು ಮಾತ್ರವಲ್ಲದೆ ಮಕ್ಕಳಿಗೆ ಗಾಳಿ, ಬೆಳಕು ಮತ್ತು ಪರಿಸರದ ಸ್ವತಂತ್ರತೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಎದುರು ರಸ್ತೆಯನ್ನು ಅಪಘಾತವಲಯವೆಂದೇ ಗುರುತಿಸಲ್ಪಟ್ಟಿತ್ತು. ಹಾಗಾಗಿ ಇದೀಗ ಗುಂಡಿಯಲ್ಲಿ ಬಿದ್ದಿರುವ ಅಂಗನವಾಡಿಗೆ ರಸ್ತೆ ಮಟ್ಟಕ್ಕೆ ಮಣ್ಣು ತುಂಬಿಸಿ ನೂತನ ಅಂಗನವಾಡಿಯನ್ನು ರಚಿಸಿಕೊಟ್ಟು ಮಕ್ಕಳಿಗೆ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸತ್ಯಶಾಂತಿ ತ್ಯಾಗ ಮೂರ್ತಿ, ಸ್ತ್ರೀಶಕ್ತಿ ಸಂಘ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.