ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ -ಕಲಾ ಐಸಿರಿ- 2023

0


ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಕಲಾ ಐಸಿರಿ 2023
ನ. 26ರಂದು “ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ, ಲಗ್ಗೆರೆ, ಬೆಂಗಳೂರು ಇಲ್ಲಿ ವಿಜೃಂಭಣೆಯಿಂದ ನಡೆಯಿತು.


ಬೆಳಗ್ಗೆ ಮಹಿಳಾ ಘಟಕದ ವತಿಯಿಂದ ಕಾವೇರಿ ಪೂಜೆ ನೆರವೇರಿಸಿ ಕಾವೇರಿ ತೀರ್ಥ ಹಾಗೂ ಪ್ರಸಾದ ಹಂಚಲಾಯಿತು.


ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ ರವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಬಾಂಧವರು ಹಾಗೂ ಸ್ಪರ್ಧಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಕುದುಕುಳಿ ಮಿಲನ ಭರತ್ ಅವರು ಮಾತನಾಡಿ ನಮ್ಮ ಗೌಡ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಅರೆಭಾಷೆಯ ಬಳಕೆಯ ಮಹತ್ವ ಹಾಗೂ ಅಗತ್ಯತೆ ಯನ್ನು ವಿವರಿಸಿದರು.

ನಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ತರವಾದ ಪಾತ್ರ ವಹಿಸುತ್ತದೆ ಎಂದರು.
ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಕುಶಾಲಪ್ಪ, ಯುವ ಘಟಕದ ಅಧ್ಯಕ್ಷೆ ಶ್ರೀಮತಿ ನೇಹಾ ಪೋರೆಯನ ಹಾಗೂ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಗೋಪಾಲಕೃಷ್ಣ ಪಿತ್ತೀಲು ಉಪಸ್ಥಿತರಿದ್ದರು.

ಬೆಳಿಗ್ಗೆ 08 ಗಂಟೆ ಯಿಂದ ಸಂಜೆ 8ರ ವರೆಗೆ ನಡೆದ ವೈವಿಧ್ಯಮಯ ಕಾರ್ಯಕ್ರಮಗಳಾದ ಚಿತ್ರ ಬಿಡಿಸುವುದು, ರಂಗೋಲಿ, ಭರತ ನಾಟ್ಯ, ನೃತ್ಯ, ಹಾಡು, ಕಿರುನಾಟಕ, ರಸ ಪ್ರಶ್ನೆ, ಫ್ಯಾಷನ್ ಶೋ,ಸೋಬಾನೆ ಇತ್ಯಾದಿ ಸ್ಪರ್ಧೆಗಳಲ್ಲಿ ಮಂಗಳೂರು, ಮೈಸೂರು, ಕೊಡಗು ಹಾಗೂ ಬೆಂಗಳೂರಿನ ಮೂಲೆ ಮೂಲೆ ಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.

ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಬಗ್ಗೆ ರಸಪ್ರಶ್ನೆ, ಆಶುಭಾಷಣ ಹಾಗೂ ಸಣ್ಣ ಮಕ್ಕಳಿಗೆ ಮುಖ ವರ್ಣಿಕೆ ಗಳು ವಿಶೇಷ ಆಕರ್ಷಣೆಯಾಗಿ ನೆರೆದಿದ್ದ ನೂರಾರು ಸಮಾಜ ಬಾಂಧವರ ಮೆಚ್ಚುಗೆಗೆ ಪಾತ್ರ ವಾಯಿತು. ನೆರೆದಿದ್ದ ಎಲ್ಲರಿಗೂ ರುಚಿರುಚಿಯಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.