ಮೆಡಿಕಲ್ ಶಾಪ್‌ಗೆ ಕರೆ ಮಾಡಿ ಹಣ ವಂಚನೆಗೆ ಯತ್ನ

0

ಮಾಲಕರ ಸಕಾಲಿಕ ಜಾಗೃತಿಯಿಂದ ವಿಫಲಗೊಂಡ ಪ್ರಯತ್ನ

ಆರ್ಮಿಯವರ ಹೆಸರು ಹೇಳಿ ಮತ್ತೆ ಹಣ‌ ಲಪಟಾಯಿಸುವ ದಂಧೆ

ಮೆಡಿಕಲ್ ಶಾಪೊಂದಕ್ಕೆ ದೂರವಾಣಿ ಕರೆ ಮಾಡಿ ಹಣ ವಂಚನೆಗೆ ಯತ್ನಿಸಿದ ಘಟನೆಯೊಂದು ನಡೆದಿದ್ದು, ಮಾಲಕರ ಸಕಾಲಿಕ ಜಾಗ್ರತೆಯ ಕಾರಣದಿಂದ ಈ ಯತ್ನ ವಿಫಲವಾಗಿದೆ.

ಪೈಚಾರಿನಲ್ಲಿರುವ ಮೆಡಿಕಲ್ ವೊಂದಕ್ಕೆ ನಿನ್ನೆ ದೂರವಾಣಿ ಕರೆಯೊಂದು ಬಂದಿದ್ದು, ತಾನು ಆರ್ಮಿಯವರು ಮಾತನಾಡುತ್ತಿರುವುದಾಗಿಯೂ, ನಮ್ಮ ಕ್ಯಾಂಪ್ ನಡೆಯುತ್ತಿದೆ ಎಂದು ಹೇಳಿ ಕೆಲವು ಔಷಧಿಗಳ ಲಿಸ್ಟ್ ಕಳುಹಿಸಿ ಪ್ಯಾಕ್ ಮಾಡಿ ಇಡುವಂತೆ ಸೂಚಿಸಿದ್ದರು. ಅದರಂತೆ ಮೆಡಿಕಲ್‌ನವರು ಎಲ್ಲಾ ಔಷಧಿಗಳನ್ನು ಸಿದ್ಧಪಡಿಸಿ ಇಟ್ಟಿದ್ದರು. ಬಿಲ್ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ ಆ ವ್ಯಕ್ತಿ ಸ್ಕ್ಯಾನರ್ ಕಳಿಸುವಂತೆ ತಿಳಿಸಿದ್ದರು. ಅದರಂತೆ ಮೆಡಿಕಲ್‌ನವರು ಸ್ಕ್ಯಾನರ್ ಕಳುಹಿಸಿ 1800 ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿ ಆ ವ್ಯಕ್ತಿ 18600 ಹಣ ಹಾಕಿದ ಸ್ಕ್ರೀನ್‌ಶಾಟ್ ಕಳುಹಿಸಿದರು. ಸ್ವಲ್ಪ ಹೊತ್ತಲ್ಲೇ ಅವರು ಮತ್ತೆ ಕಾಲ್ ಮಾಡಿ ತಾನು 1800 ರ ಬದಲಿಗೆ 18600 ಹಣ ಹಾಕಿದ್ದು, ಅದು ಆಸ್ಪತ್ರೆಗೆ ಪಾವತಿಸಬೇಕಿರುವ ಹಣವಾಗಿದ್ದು,, ತಕ್ಷಣ ವಾಪಾಸ್ ಕಳುಹಿಸುವಂತೆ ಹೇಳಿದರೆನ್ನಲಾಗಿದೆ. ಮೆಡಿಕಲ್‌ನವರು ಇದನ್ನು ಪರಿಶೀಲಿಸುತ್ತಿರುವಂತೆ ಮಾಲಕರು ಅಲ್ಲಿಗೆ ಬಂದರು. ಅವರು ಅಕೌಂಟ್ ಪರಿಶೀಲಿಸಿದಾಗ 18600 ಅಕೌಂಟ್‌ಗೆ ಬಂದಿರಲಿಲ್ಲ. ಆ ವ್ಯಕ್ತಿ ಹಣ ಹಾಕಿದ ರೀತಿಯ ಸ್ಕ್ರೀನ್‌ಶಾಟ್ ಕಳುಹಿಸಿ ಹಣ ಲಪಟಾಯಿಸಲು ಮುಂದಾಗಿದ್ದರು. ಮೆಡಿಕಲ್ ಮಾಲಕರ ಸಕಾಲಿಕ ಜಾಗೃತಿಯಿಂದಾಗಿ ಈ ವಂಚನೆಯ ಯತ್ನ ವಿಫಲವಾಯಿತು.ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಘಟನೆಗಳು ವರದಿಯಾಗುತ್ತಿದ್ದು, ಅಂಗಡಿ ಮಾಲಕರು ಜಾಗೃತಿ ವಹಿಸಬೇಕಾಗಿದೆ.