ದ. 25 ಮತ್ತು 26ರಂದು ಕೆವಿಜಿ ಸುಳ್ಯ ಹಬ್ಬ

0


ವೈದ್ಯ ಡಾ.ರಘುರಾಮ ಮಾಣಿಬೆಟ್ಟು, ವಿಜ್ಞಾನಿ ಶಂಭಯ್ಯ ಕೊಡಪಾಲರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ


ಡಾ.ನಿತಿನ್ ಪ್ರಭು, ಹರಿಕೃಷ್ಣ ರೈ, ಅರವಿಂದ ಚೊಕ್ಕಾಡಿ, ಎಸ್.ಆರ್.ಕೇಶವ, ತೇಜಸ್ವಿ ಕಡಪಳ, ಡಾ.ತಾರಾ ನಂದನ್‌ರಿಗೆ ಕೆವಿಜಿ ಯುವ ಸಾಧಕ ಪ್ರಶಸ್ತಿ

ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ ೯೫ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ನಡೆಯುವ ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ – 2023 ಡಿ. 25 ಮತ್ತು 26 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದರು. ಸುಳ್ಯ ಪ್ರೆಸ್ ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ. 25 ರಂದು ಬೆಳಿಗ್ಗೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ. ಕ್ರೀಡಾಕೂಟಕ್ಕೆ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಚಾಲನೆ ನೀಡಲಿದ್ದಾರೆ. ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದ ಗೌರವ ಉಪಸ್ಥಿತಿ ಇರಲಿದ್ದಾರೆ.


ಯುವ ಸಾಧಕರಿಗೆ ಸನ್ಮಾನ:

ಸಂಜೆ 6 ರಿಂದ ಸುಳ್ಯದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ. ಬಳಿಕ ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಸಾಧಕರನ್ನು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಅಭಿನಂದಿಸಲಿದ್ದಾರೆ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ನಿತಿನ್ ಪ್ರಭು, ಇಂಜಿನಿಯರಿಂಗ್ ಕ್ಷೇತ್ರದ ಹರಿಕೃಷ್ಣ ರೈ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅರವಿಂದ ಚೊಕ್ಕಾಡಿ, ಉದ್ಯಮ ಕ್ಷೇತ್ರದ ಎಸ್.ಆರ್.ಕೇಶವ, ಸಾಂಸ್ಕೃತಿಕ ಸಂಘಟನೆಯಲ್ಲಿ ತೇಜಸ್ವಿ ಕಡಪಳ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ತಾರಾ ನಂದನ್ ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಬಳಿಕ ರಾತ್ರಿ ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ಮನೆ ಹಸ್ತಾಂತರ:

ದ. ೨೬ ರಂದು ಬೆಳಿಗ್ಗೆ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಸಮಾಜ ಸೇವಾ ಕಾರ್ಯಕ್ರಮದಡಿಯಲ್ಲಿ ನೀಡುವ ರೂ. 1 ಲಕ್ಷ ಸಹಾಯಧನದೊಂದಿಗೆ ಪೂರ್ಣಗೊಳಿಸಿದ ಜಯನಗರ ಚೆಂಡೆಮೂಲೆಯ ಸರೋಜಾ ಇವರ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಮನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಹಸ್ತಾಂತರ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ನ.ಪಂ.ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್, ನ.ಪಂ.ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ ಭಾಗವಹಿಸಲಿದ್ದಾರೆ.

ಕೆವಿಜಿ ಸಂಸ್ಮರಣೆ ಮತ್ತು ಕೆವಿಜಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ:

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್ ಅವರು ಕೆವಿಜಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ. ರಘುರಾಮ ಮಾಣಿಬೆಟ್ಟು ಮತ್ತು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲ ಅವರಿಗೆ ಕೆವಿಜಿ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಭೆಯ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ವಹಿಸಲಿದ್ದಾರೆ.


ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಆರಂಭಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಕಲಾಮಯಂ ಇವರಿಂದ ಜನಪದ ಕಲೆಗಳ ಅನಾವರಣ, ಜಾನಪದ ನೃತ್ಯ ಸಂಗೀತ ಮತ್ತು ವಾದ್ಯ ಪರಿಕರಗಳ ಸಮ್ಮಿಲನ ಜಾನಪದ ವೈಭವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆವಿಜಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಜನಾರ್ಧನ ನಾಯ್ಕ ಪದಾಧಿಕಾರಿಗಳಾದ ಡಾ.ಎನ್.ಎ. ಜ್ಞಾನೇಶ್, ಚಂದ್ರಾ ಕೋಲ್ಟಾರ್, ರಾಜು ಪಂಡಿತ್, ಪ್ರಭಾಕರನ್ ನಾಯರ್ ಸಿ.ಎಚ್, ಚಂದ್ರಶೇಖರ ನಂಜೆ ಉಪಸ್ಥಿತರಿದ್ದರು.