ಮರಳು ಸಾಗಾಟಕ್ಕೆ ಪೋಲೀಸರ ತಡೆ : ಶಾಸಕರ ಬಳಿ ಮರಳು ಸಾಗಾಟಗಾರರ ನಿಯೋಗ

0

ಎಸ್.ಐ. ಕರೆಸಿ ಮಾತನಾಡಿದ ಶಾಸಕರು

ಸುಳ್ಯದಲ್ಲಿ‌ ನದಿಯಿಂದ ಮರಳು ತೆಗೆದು ಸಾಗಾಟ ಮಾಡುವುದಕ್ಕೆ ಪೋಲೀಸರು ತಡೆ ಮಾಡುತ್ತಿರುವ ಕುರಿತು ಮರಳು ಸಾಗಾಟಗಾರರು ಶಾಸಕರ ಬಳಿ ತೆರಳಿ ದೂರಿಕೊಂಡ ಹಾಗೂ ಈ ಸಮಸ್ಯೆ ಕುರಿತು‌ ಪರಿಹಾರಕ್ಕೆ ಸಂಬಂಧಿಸಿದಂತೆ ಎಸ್.ಐ. ಯವರನ್ನು‌ ಕರೆಸಿ‌ ಶಾಸಕರು ಚರ್ಚೆ ನಡೆಸಿದ ಘಟನೆ ವರದಿಯಾಗಿದೆ.

ಸುಳ್ಯ, ಅರಂತೋಡು, ಸಂಪಾಜೆ ಭಾಗದಲ್ಲಿ‌ ನದಿಯಿಂದ ಮರಳು ತೆಗೆದು ಸಾಗಾಟ‌ ಮಾಡುವುದಕ್ಕೆ‌ ಸುಳ್ಯ ಪೋಲೀಸರು ಇತ್ತೀಚೆಗೆ ತಡೆ ಮಾಡಿದ್ದರು. ಇದರಿಂದ ಮರಳು ಸಾಗಾಟ ಕಷ್ಟವಾಗಿತ್ತು. ಈ ಕುರಿತು ಮರಳು ಸಾಗಾಟಗಾರರು ಶಾಸಕಿ ಭಾಗೀರಥಿ ಮುರುಳ್ಯರ ಬಳಿ ತೆರಳಿ ತಮ್ಮ ಸಮಸ್ಯೆ ತೋಡಿಕೊಂಡರು.

ಮರಳು ಸಾಗಾಟಗಾರರ‌ ಸಮಸ್ಯೆ ಆಲಿಸಿದ ಶಾಸಕರು ಸುಳ್ಯ ಎಸ್.ಐ. ಯವರೊಂದಿಗೆ ಮಾತನಾಡುವ ಭರವಸೆ ನೀಡಿದ್ದರು.

ಅದರಂತೆ ಇಂದು ಸುಳ್ಯ ತಾಲೂಕು ಪಂಚಾಯತ್ ನ ತಮ್ಮ‌ ಕಚೇರಿಗೆ ಎಸ್.ಐ. ಈರಯ್ಯ ದೂಂತೂರು ರನ್ನು ಕರೆಸಿದ ಶಾಸಕರು ಈ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಪರ್ಮಿಟ್ ಇಲ್ಲದೆ ಮರಳು ಸಾಗಾಟ ಅನುಮತಿ ಸಾಧ್ಯವಿಲ್ಲ. ಮರಳು ಸಾಗಾಟ ಮಾಡುವವರೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ‌ ಬಿಡುತ್ತಾರೆ. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಎಸ್.ಐ. ಹೇಳಿದರು.

ಪಂಚಾಯತ್ ಗಳಿಂದ ಮನೆ ಪಡೆದ ಬಡವರು, ಮರಳಿನ ಸಮಸ್ಯೆಯಿಂದಾಗಿ ಮನೆ ಪೂರ್ತಿಗೊಳಿಸಲಾಗದೇ ಇದ್ದಾರೆ. ಆ ಕೆಲಸ ಆಗಬೇಕಲ್ಲವೇ? ನಾವು ಮಾನವೀಯತೆ ನೋಡಬೇಕಲ್ಲವೇ ? ಎರಡು ಮೂರು ತಿಂಗಳಲ್ಲಿ ಮಳೆ ಬಂದರೆ ಮನೆ ಕೆಲಸಕ್ಕೆ ಕಷ್ಟವಾಗಬಹುದು ಎಂದು ಶಾಸಕರು ಹೇಳಿದರೆಂದು ತಿಳಿದುಬಂದಿದೆ.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ‌ಮೇನಾಲ ಸಹಿತ ಹಲವರು ಉಪಸ್ಥಿತರಿದ್ದರು.