ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸೂಚನೆ
ಕೇರಳದಲ್ಲಿ ಕೊರೊನಾ ಹೆಚ್ಚಳವಾಗಿರುವುದರಿಂದ ಕೇರಳದ ಗಡಿಭಾಗವಾದ ಸುಳ್ಯದಲ್ಲಿಯೂ ಎಚ್ಚರ ವಹಿಸಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಗಡಿಭಾಗದಲ್ಲಿ ತಪಾಸಣೆ ಮುಂದುವರಿಯಲಿದೆ. ಕೋವಿಡ್ ನಿಯಮವನ್ನು ಎಲ್ಲರೂ ಪಾಲಿಸಬೇಕು ಎಂದು ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಭಿಷೇಕ್ ವಿ ಹೇಳಿದ್ದಾರೆ.
ಡಿ.೨೦ರಂದು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸರಕಾರ ಸಭೆ ನಡೆಸಿ ಕೋವಿಡ್ ನಿಯಮಾವಳಿಯ ಹೊಸ ಗೈಡ್‌ಲೈನ್ ಹೊರಡಿಸುತ್ತದೆ. ಅದನ್ನು ನಾವೆಲ್ಲರೂ ಪಾಲಿಸುವುದರ ಜತೆಗೆ, ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಕೊರೊನಾ ತಡೆಗಟ್ಟಲು ಆರೋಗ್ಯ ಇಲಾಖೆಯವರು ಎಲ್ಲ ಮುಂಜಾಗರೂಕತೆ ವಹಿಸಬೇಕು. ಟೆಸ್ಟಿಂಗ್ ಕೆಪಾಸಿಟಿ ಹೆಚ್ಚಳ ಮಾಡಬೇಕು. ಸೋಂಕು ಕಂಡು ಬಂದರೆ ಕ್ವಾರೆಂಟೈನ್ ಆಗಬೇಕಾಗುತ್ತದೆ. ಈ ಹಿಂದೆ ಪಾಲಿಸಿಕೊಂಡು ಬಂದ ಎಲ್ಲ ನಿಯಮವನ್ನು ಮುಂದುವರಿಸಬೇಕು ಎಂದ ಅವರು, ಸುಳ್ಯ ಕೇರಳಕ್ಕೆ ತಾಗಿಕೊಂಡಿದೆ ಆದ್ದರಿಂದ ಗಡಿ ಭಾಗದಲ್ಲೂ ತಪಾಸಣೆ ಮುಂದುವರಿಯುತ್ತದೆ. ಆರೋಗ್ಯ ಇಲಾಖೆಯವರ ಜತೆ ಎಲ್ಲ ಇಲಾಖೆಯವರೂ ಸಹಕಾರ ನೀಡಬೇಕು'' ಎಂದು ಸೂಚನೆ ನೀಡಿದರು. ಅಂಗನವಾಡಿಗಳಿಗೆ ಅಗ್ನಿ ನಂದಕ ಅಳವಡಿಸಲು ಬಾಕಿ ಇರುವ ಕುರಿತು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಪಾಲನಾ ವರಿದಿಯ ವಿವರ ನೀಡಿದಾಗ, ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂದು ಆಡಳಿತಾಧಿಕಾರಿಯವರು ಪ್ರಶ್ನಿಸಿದರು.
ಇಲಾಖೆಯಿಂದ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ” ಎಂದು ಹೇಳಿದಾಗ, ಪತ್ರ ಬರೆದು ಸುಮ್ಮನಿರುವುದಲ್ಲ. ಪ್ರೋಗೇಸ್ ತೋರಿಸಬೇಕು ಎಂದು ಹೇಳಿದ ಅವರು, ಇನ್ನೆರಡು ದಿನದಲ್ಲಿ ಈ ಕುರಿತು ನನಗೆ ವರದಿ ನೀಡಬೇಕು ಎಂದು ಹೇಳಿದರು.
ತಾಲೂಕಿನಲ್ಲಿ ಪ.ಜಾತಿ ಮತ್ತು ಪ.ಪಂಗಡ ದವರ ಜನಸಂಖ್ಯೆಯ ಕುರಿತು ಸಮಾಜಕಲ್ಯಾಣಾಧಿಕಾರಿಯವರಲ್ಲಿ ಮಾಹಿತಿ ಕೇಳಿದಾಗ, ಸಮಾಜ ಕಲ್ಯಾಣ ಅಧಿಕಾರಿಯವರಲ್ಲಿ ಮಾಹಿತಿ ಇರಲಿಲ್ಲ. ಈ ಕುರಿತು ಸಮಾಜಕಲ್ಯಾಣಾಧಿಕಾರಿಯವರನ್ನು ತಾ.ಪಂ. ಆಡಳಿತಾಧಿಕಾರಿ ಅಭಿಷೇಕ್ ತೀವ್ರ ತರಾಟೆಗೆತ್ತಿಕೊಂಡರು. ಇದು ಬೇಸಿಕ್ ವಿಷಯ. ಇದು ನಿಮಗೆ ಗೊತ್ತಿರಬೇಕು. ಇಲಾಖೆಯ ನಿಗಮಗಳ ವಿವರವೂ ನಿಮ್ಮಲ್ಲಿರಬೇಕು. ಅದೇ ಗೊತ್ತಿಲ್ಲದಿದ್ದರೆ ಹೇಗೆ'' ಎಂದು ಪ್ರಶ್ನಿಸಿದರು.
ಪ್ರತಿಯೊಂದು ಇಲಾಖೆಯವರು ಅವರ ಇಲಾಖೆಯ ಕುರಿತು ಸ್ಪಷ್ಟ ಅರಿವು ಇರಬೇಕು ಎಂದು ಅವರು ಸಮಾಜಕಲ್ಯಾಣಾಧಿಕಾರಿಯವರ ಅಮಾನತಿಗೆ ಬರೆಯಿರಿ ಎಂದು ಇ.ಒ. ರಾಜಣ್ಣರಿಗೆ ಸೂಚನೆ ನೀಡಿದರು.
ಸರಕಾರದ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಹಾಗೂ ಅನ್ನಭಾಗ್ಯದ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.
ಗೃಹಲಕ್ಷ್ಮೀ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಇನ್ನೂ ಹಣ ಬಾರದಿರುವ ಫಲಾನುಭವಿಗಳ ಕುರಿತು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಿ ಎಂದು ಅವರು ಸೂಚನೆ ನೀಡಿದರು.
ಇ.ಒ. ರಾಜಣ್ಣ, ತಹಶೀಲ್ದಾರ್ ಮಂಜುನಾಥ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.