ರಾಧಾಕೃಷ್ಣ ಬೊಳ್ಳೂರು ಬಿಜೆಪಿಯಲ್ಲಿ ಎಲ್ಲಾ ಸ್ಥಾನವನ್ನು ಪಡೆದುಕೊಂಡಿದ್ದಾರೆ

0

ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಅವರ ಮಾತು ಹಾಸ್ಯಾಸ್ಪದ : ಹರೀಶ್ ಕಂಜಿಪಿಲಿ

” ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ರಾಧಾಕೃಷ್ಣ ಬೊಳ್ಳೂರು ರವರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡು ಈಗ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿಯಲ್ಲಿ ಅವರು ಇರುವಾಗ ಎಲ್ಲಾ ಸ್ಥಾನಗಳನ್ನು ಪಡೆದುಕೊಂಡು ಇದೀಗ ಬಿಜೆಪಿಯಲ್ಲಿ ಕಾರ್ಯಕರ್ತರ ಕಡೆಗಣನೆ ಆಗುತ್ತಿದೆ ಎಂಬ ಮಾತನ್ನು ಆಡುತ್ತಿದ್ದಾರೆ” ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಬಿ.ಜೆ.ಪಿ.ಯಲ್ಲಿ ಕಳೆದ 10 ವರ್ಷಗಳಲ್ಲಿ ಎಲ್ಲಾ ಗೌರವ ಸ್ಥಾನವನ್ನು ಪಡೆದುಕೊಂಡ ಅವರು ಕೇವಲ 2 ಗ್ರಾಮಗಳಲ್ಲಿ ಮಾತ್ರ ಗುರುತಿಸಿಕೊಂಡಿದ್ದರು. ಹಾಗಿದ್ದರೂ ಅವರಿಗೆ ಜಿಲ್ಲಾ ಮಟ್ಟದ ಸ್ಥಾನಮಾನವನ್ನು ನೀಡಿ ಬಿಜೆಪಿ ಪಕ್ಷ ಅವರನ್ನು ಗೌರವಿಸಿತ್ತು. ಎ.ಪಿ.ಎಂ.ಸಿ. ಉಪಾಧ್ಯಕ್ಷತೆ, ತಾಲೂಕು ಪಂಚಾಯತ್ ಸದಸ್ಯತ್ವ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷತೆ, ಬಿಜೆಪಿ ಮಂಡಲ ಉಪಾಧ್ಯಕ್ಷತೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷತೆ ಈ ಎಲ್ಲಾ ಸ್ಥಾನಗಳನ್ನು ಅಲಂಕರಿಸಿದ್ದ ಅವರು ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಇವರಿಗೆ ಅಧಿಕಾರ ಅನುಭವಿಸುವ ಮತ್ತು ಪಡೆಯುವ ಉದ್ದೇಶದಿಂದ ಇವರು ಕಾಂಗ್ರೆಸ್‌ಗೆ ಹೋಗಿರಬಹುದೆಂದು ಅವರು ಹೇಳಿದರು.

ಬಿಜೆಪಿಯಲ್ಲಿ ನಾಯಕರುಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಕಾರ್ಯಕರ್ತರುಗಳಿಗೆ ನೀಡಲಾಗುತ್ತದೆ. ನಮ್ಮಂತ ನಾಯಕರಿಂದ ಪಕ್ಷವಲ್ಲ. ಇದು ಕಾರ್ಯಕರ್ತರುಗಳು ಬೆಳೆಸಿದ ಪಕ್ಷ. ಕಾರ್ಯಕರ್ತರುಗಳೇ ಪಕ್ಷವನ್ನು ಗೆಲ್ಲಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿ 38 ಗ್ರಾಮ ಪಂಚಾಯತುಗಳಲ್ಲಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಇದ್ದಾರೆ.

ರಾಜೀನಾಮೆ ಕೊಟ್ಟು ಗೆದ್ದು ತೋರಿಸಲಿ

ರಾಧಾಕೃಷ್ಣ ಬೊಳ್ಳೂರುರವರಿಗೆ ನಾವು ಸವಾಲನ್ನು ಹಾಕುತ್ತೇವೆ. ಅವರು ಇದೀಗ ಇರುವ ಸೊಸೈಟಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಕಂಜಿಪಿಲಿ ಸವಾಲು ಹಾಕಿದರು. ಮಾಜಿ ಶಾಸಕ ಅಂಗಾರರನ್ನು ಪಕ್ಷದಲ್ಲಿ ಕಡೆಗಣಿಸಿದೆ ಎಂಬ ಅವರ ಆರೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ” ಈ ಪ್ರಶ್ನೆಗೆ ಉತ್ತರವನ್ನು ಅಂಗಾರರೇ ಕೊಡಬೇಕಾಗಿದೆ. ಏಕೆಂದರೆ ನಾವು ಎಲ್ಲಾ ಸಭೆಗಳಿಗೆ ಅಂಗಾರರವರಿಗೆ ಆಹ್ವಾನವನ್ನು ನೀಡಿದ್ದೇವೆ. ಎಲ್ಲಿಯೂ ಅವರನ್ನು ಕಡೆಗಣಿಸಿಲ್ಲ. ಅಲ್ಲದೆ ಅಂಗಾರರು ಶಾಸಕರಾಗಿದ್ದಾಗ ಜಿಲ್ಲಾ ಬಿಜೆಪಿ ಕೋರ್‌ಕಮಿಟಿಯ ಸದಸ್ಯರಾಗಿದ್ದರು. ಶಾಸಕರ ನೆಲೆಯಲ್ಲಿ ಸುಳ್ಯ ಕೋರ್‌ಕಮಿಟಿಗೆ ಅಂದು ಅವರು ಭಾಗವಹಿಸುತ್ತಿದ್ದರು” ಎಂದು ಕಂಜಿಪಿಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಸುಭೋದ್ ಶೆಟ್ಟಿ ಮೇನಾಲ, ಎನ್.ಎ.ರಾಮಚಂದ್ರ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ, ಎಸ್.ಎನ್.ಮನ್ಮಥ, ವಿನಯ ಕುಮಾರ್ ಕಂದಡ್ಕ, ಚನಿಯ ಕಲ್ತಡ್ಕ, ಬಾಲಗೋಪಾಲ ಸೇರ್ಕಜೆ ಮೊದಲಾದವರು ಇದ್ದರು.