ದೇವಚಳ್ಳ ಶಾಲೆಯಲ್ಲಿ ಯಾವುದೇ ಅವ್ಯಹಾರ ನಡೆದಿಲ್ಲ – ಶಾಲೆಯಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿಗೆ ದಾಖಲೆ ಇದೆ
ಸರಕಾರಿ ಶಾಲೆಯ ಅಭಿವೃದ್ಧಿ ಕಂಡು ಈ ರೀತಿ ತೇಜೋವಧೆ ಮಾಡುವುದು ಖಂಡನೀಯ
ಅನಗತ್ಯ ಅಪಪ್ರಚಾರ ನಡೆಸಿದರೆ ಕಾನೂನು ಕ್ರಮ : ಎಸ್.ಡಿ.ಎಂ.ಸಿ.
ಲಂಚ ಭ್ರಷ್ಟಾಚಾರದ ಬಗ್ಗೆ ಸುದ್ದಿಗೆ ಬಾಲಕ ಬರೆದ ಪತ್ರದಲ್ಲಿ ದೇವಚಳ್ಳ ಶಾಲೆಯಲ್ಲಿ ಒಂದು ಲಕ್ಷ ಭ್ರಷ್ಟಾಚಾರ ಆಗಿ ದೂರು ಕೊಟ್ಟಾಗ ಯಾರು ಬರಲಿಲ್ಲ ಎಂದು ಉಲ್ಲೇಖ ಮಾಡಿದ್ದು, ಈ ವಿಚಾರದ ಬಗ್ಗೆ ದೇವಚಳ್ಳ ಶಾಲಾ ಎಸ್.ಡಿ.ಎಂ.ಸಿ. ಇಂದು ಶಾಲೆಯಲ್ಲಿ ಸಭೆ ನಡೆಸಿ ಸ್ಪಷ್ಟನೆ ನೀಡಿದೆ.
“ಶಾಲೆಯಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿಗೆ ಸರಿಯಾದ ದಾಖಲೆಗಳು ಇದೆ. ಶಾಲೆ ಅಥವಾ ಶಾಲಾಭಿವೃದ್ಧಿ ಸಮಿತಿಗೆ ಸರಕಾರದಿಂದ ಅಥವಾ ಇಲಾಖೆಗಳಿಂದ ಲಕ್ಷಾನುಗಟ್ಟಲೆ ಯಾವುದೇ ಹಣ ಈ ತನಕ ಬಂದಿರುವುದಿಲ್ಲ. ಶಾಲೆಯಲ್ಲಿ ಯಾವುದೇ ಕಾಮಗಾರಿಗಳು ನಡೆದಿದ್ದರೂ ಅದು ಇಲಾಖೆಗಳಿಂದ ಇಂಜಿನಿಯರ್ ಗಳ ಎಸ್ಟಿಮೇಟ್ ನಲ್ಲಿ ಟೆಂಡರ್ ಮೂಲಕವೇ ನಡೆದಿದೆ. ಹಣಕಾಸಿನ ವ್ಯವಹಾರ ಜವಾಬ್ದಾರಿ ನಮಗಿರುವುದಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗಿದ್ದರೂ ಶಾಲೆಯಲ್ಲಿ ಒಂದು ಲಕ್ಷ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಶಾಲೆಯ ಆಟದ ಮೈದಾನ ವಿಸ್ತರಣೆ ಸಂದರ್ಭ ನಿಗದಿಪಡಿಸಿದಷ್ಟು ಕೆಲಸವಾಗಿಲ್ಲ ಎಂದು ವಿದ್ಯಾರ್ಥಿ ಯ ತಂದೆ ಹರಿಪ್ರಸಾದ್ ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಇಲಾಖೆ ತನಿಖೆ ನಡೆಸಿದೆ. ಈ ಕಾಮಗಾರಿಯ ಬಗ್ಗೆಯೂ ಶಾಲೆ ಅಥವಾ ಶಾಲಾಭಿವೃದ್ಧಿ ಸಮಿತಿಯವರಲ್ಲಿ ಯಾವುದೇ ಹಣಕಾಸಿನ ವ್ಯವಹಾರ ನಡೆದಿರುವುದಿಲ್ಲ.
ಹಾಗಿದ್ದರೂ ಈ ರೀತಿ ಶಾಲೆಯ ಹೆಸರನ್ನು ಬರೆದು ಅಪಪ್ರಚಾರ ಮಾಡುವುದು ಸರಿಯಲ್ಲ. ಶಾಲೆಯ ಅಭಿವೃದ್ಧಿ ಯನ್ನು ಕಂಡು ಈ ರೀತಿಯಾಗಿ ತೇಜೋವಧೆಯನ್ನು ಮಾಡಿರುವುದು ಖಂಡನೀಯ. ಇನ್ನು ಮುಂದೆ ಯಾವುದೇ ದಾಖಲೆಗಳಿಲ್ಲದೇ, ಅನಗತ್ಯವಾಗಿ ಈ ರೀತಿಯ ಆರೋಪ ಮಾಡುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯನಂದ ಪಟ್ಟೆ ತಮ್ಮ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.