ಕುರುಂಜಿಭಾಗ್ :ಬಾಲಕಿಯರ ವಸತಿ ನಿಲಯದಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ

0

ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಇದರ ಸಂಯುಕ್ತಾಶ್ರಯದಲ್ಲಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮ ಜನವರಿ 13 ರಂದು ಕುರಂಜಿಭಾಗ್ ಬಾಲಕಿಯರ ವಸತಿ ನಿಲಯದ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ಪೊಲೀಸ್ ಠಾಣಾ ಎ ಎಸ್ ಐ ಗಂಗಾಧರ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸುಳ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾ ಅಧ್ಯಕ್ಷತೆಯನ್ನು ವಹಿಸಿದ್ದರು.

ಮರ್ಕಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವರಾಜ್ ಎಸ್ ಕೆ ಅತಿಥಿ ಉಪನ್ಯಾಸವನ್ನು ನೀಡಿ ಡಾ. ಬಿ ಆರ್ ಅಂಬೇಡ್ಕರ್ ರವರ ಆದರ್ಶ ಜೀವನದ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಉಪನಿರೀಕ್ಷಕರಾದ ಸರಸ್ವತಿ ಬಿ ಟಿ, ಶಿಕ್ಷಕರಾದ ಚಂದ್ರಶೇಖರ್,ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಉಪಸ್ಥಿತರಿದ್ದು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಆಯೋಜಕರಾದ ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರರು,ಮಂಗಳೂರು 6ನೇ ಜೆ ಎಂ ಎಫ್ ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಜನಾರ್ಧನ್ ಬಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ‘ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅವರ ತತ್ವ ಮತ್ತು ಸಿದ್ಧಾಂತಗಳ ಮಹತ್ವವನ್ನು ಸಮಾಜದ ಪ್ರತಿಯೊಬ್ಬ ನಾಗರಿಕರು ಗೌರವಿಸಬೇಕೆಂದು ಹೇಳಿದರು.

ಬಳಿಕ ‘ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ದಾಂತಗಳ ಮಹತ್ವ’ದ ಬಗ್ಗೆ ವಿದ್ಯಾರ್ಥಿನಿಯರಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಏಳು ವಿದ್ಯಾರ್ಥಿನಿಯರಲ್ಲಿ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಕೃತಿಕಾ ಪ್ರಥಮ ಸ್ಥಾನ,ಬಿ ಕಾಂ ವಿದ್ಯಾರ್ಥಿನಿ ಲಿಖಿತ ದ್ವಿತೀಯ ಸ್ಥಾನ,ಎರಡನೇ ವರ್ಷದ ಬಿ ಇ ವಿದ್ಯಾರ್ಥಿನಿ ವೇದಾವತಿ ಮೂರನೇ ಸ್ಥಾನ ಪಡೆದುಕೊಂಡರು.


ತೀರ್ಪುಗಾರರಾಗಿ ಶಿಕ್ಷಕರುಗಳಾದ ದೇವರಾಜ್ ಎಸ್ ಕೆ, ಚಂದ್ರಶೇಖರ್,ಪೊಲೀಸ್ ಉಪನಿರೀಕ್ಷಕರಾದ ಸರಸ್ವತಿ ಬಿ ಟಿ ಸಹಕರಿಸಿದರು. ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಎಸ್ ಕೆ ಗೀತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿನಿಲಯದ ಸಿಬ್ಬಂದಿಗಳು ಸಹಕರಿಸಿದರು.