ಮೇಲಿನ ಮುಕ್ಕೂರು : ಜೀರ್ಣೋದ್ಧಾರದ ಪೂರ್ವಭಾವಿ ಸಭೆ

0

ಸಾವಿರಾರು ವರ್ಷಗಳ ಇತಿಹಾಸ ಇರುವ ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ಭಕ್ತವೃಂದದ ಪೂರ್ವಭಾವಿ ಸಭೆಯು ಶನಿವಾರ ಮೇಲಿನ ಮುಕ್ಕೂರು ವಠಾರದಲ್ಲಿ ನಡೆಯಿತು. ಆರಂಭದಲ್ಲಿ ಕ್ಷೇತ್ರದ ಅಧಿದೇವತೆಗೆ ಪುರೋಹಿತ ಲಕ್ಷ್ಮೀಶ ಬೈಪಾಡಿತ್ತಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಭೆ ಆರಂಭಿಸಲಾಯಿತು.

ಸಾವಿರಾರು ವರ್ಷಗಳ ಇತಿಹಾಸ..!
ಮುಕ್ಕೂರು ತರವಾಡು ಕ್ಷೇತ್ರದ ಇತಿಹಾಸದ ಬಗ್ಗೆ ಲಭ್ಯ ಮಾಹಿತಿಯನ್ನು ತರವಾಡು ಕ್ಷೇತ್ರದ ಲಕ್ಷ್ಮೀಶ ಬೈಪಡಿತ್ತಾಯ ಅವರು ಸಭೆಯ ಮುಂದಿರಿಸಿದರು. ಜೈನ ಬಲ್ಲಾಳರ ಆಡಳಿತಕ್ಕೆ ಒಳಪಟ್ಟಿದ್ದ ಈ ಮನೆಗೆ ಎಂಟುನೂರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಪೂಜಾ ಕಾರ್ಯಕ್ಕೆ ಬಂದಿದ್ದರು ಎನ್ನುವ ಮಾಹಿತಿ ಇದ್ದು ಇದಕ್ಕಿಂತ ಹಿಂದಿನ ಇತಿಹಾಸ ಲಭ್ಯವಿಲ್ಲ. ಉಪ್ಪಿನಂಗಡಿ ತಾಲೂಕು ಆಡಳಿತದ ಕೇಂದ್ರವಾಗಿದ್ದ ಸಂದರ್ಭದಲ್ಲೇ ಈ ಕ್ಷೇತ್ರದ ಇರುವಿಕೆಯ ಬಗ್ಗೆ ದಾಖಲೆಗಳು ಲಭ್ಯವಿರುವ ಬಗ್ಗೆ ವಿವರಿಸಿದರು. ಮೇಲಿನ ಮುಕ್ಕೂರು ಮನೆಯು ಭಂಡಾರದ ಮನೆ, ನ್ಯಾಯ ತೀರ್ಮಾನದ ಮನೆಯಾಗಿಯು ಇತ್ತು ಅನ್ನುವುದಕ್ಕೆ ಇತಿಹಾಸ ಇದೆ ಎಂದರು.

ಇರುವಿಕೆ ತೋರಿಸಿದ್ದ ದೈವ..!
ಕ್ಷೇತ್ರವು ಅತ್ಯಂತ ಕಾರಣಿಕತೆಯಿಂದ ಕೂಡಿದ್ದು ಮೇಲಿನ ಮುಕ್ಕೂರಿನ ಮನೆಯಲ್ಲಿ ದೈವ ದೇವರುಗಳ ಇರುವಿಕೆಯ ಕುರಿತಂತೆ ನಡೆದ ಕೆಲ ಘಟನೆಗಳನ್ನು ಲಕ್ಷ್ಮೀಶ ಬೈಪಡಿತ್ತಾಯ ಅವರು ಸಭೆಯ ಮುಂದಿಟ್ಟರು. ಸಾನಿಧ್ಯ ಅಭಿವೃದ್ಧಿಗಾಗಿ ದೇವಿ ಮೂಲಕ ಇರುವಿಕೆ ತೋರಿಸಿದ್ದ ದೈವದ ಕೆಲವು ಘಟನೆಗಳನ್ನು ಉದಾಹರಿಸಿದರು. ಶ್ರೀ ಉಳ್ಳಾಕುಲು, ರಕ್ತೇಶ್ವರಿ ದೈವಕ್ಕೆ ಸಂಬಂಧಿಸಿದ ಕುರುಹುಗಳು ಇಲ್ಲಿದ್ದು ಕ್ಷೇತ್ರದ ಪುನುರುತ್ಥಾನದ ನಿಟ್ಟಿನಲ್ಲಿ ಆಗಬೇಕಾದ ಪ್ರಕ್ರಿಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಲಾಯಿತು.

ಅಷ್ಟಮಂಗಲ ಪ್ರಶ್ನೆ
ಕ್ಷೇತ್ರದ ಸಮಗ್ರ ಮಾಹಿತಿ ಅರಿತುಕೊಂಡು ಅದರಂತೆ ದೈವ ಸಾನಿಧ್ಯದ ಅಭಿವೃದ್ಧಿಗೆ ಮುಂದಡಿ ಇಡುವ ನಿಟ್ಟಿನಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಸೂಚಿತ ಐವರು ದೈವಜ್ಞರ ಹೆಸರನ್ನು ಶ್ರೀದೇವಿಯ ಮುಂಭಾಗದಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಿ ಚೀಟಿ ಆಧಾರದಲ್ಲಿ ಬಂದ ಓರ್ವ ದೈವಜ್ಞರನ್ನು ಆಯ್ಕೆ ಮಾಡಿಕೊಂಡು ಅವರನ್ನು ಸಂಪರ್ಕಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ತರವಾಡು ಕ್ಷೇತ್ರದ ಪ್ರಮುಖರಾಗಿರುವ ವಸಂತ ಬೈಪಡಿತ್ತಾಯ, ಊರ ಪ್ರಮುಖರಾದ ಎಂ.ಕೆ. ಉಮೇಶ್ ರಾವ್ ಕೊಂಡೆಪ್ಪಾಡಿ, ಕುಂಬ್ರ ದಯಾಕರ ಆಳ್ವ, ಉಮೇಶ್ ಕೆಎಂಬಿ, ಗಣೇಶ್ ಶೆಟ್ಟಿ ಕುಂಜಾಡಿ, ರಾಮಚಂದ್ರ ಕೋಡಿಬೈಲು ಮೊದಲಾದವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಸುಧಾಕರ ರೈ ಕುಂಜಾಡಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ, ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕಿ ಸಾವಿತ್ರಿ ಚಾಮುಂಡಿಮೂಲೆ, ಶಿವಪ್ಪ ಗೌಡ ಅಡ್ಯತಕಂಡ, ಪುರುಷೋತ್ತಮ ಗೌಡ ಕಾಯರ್‍ಮಾರ್, ಜಯಂತ ಗೌಡ ಕುಂಡಡ್ಕ, ಸಚಿನ್ ರೈ ಪೂವಾಜೆ, ಕುಶಾಲಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಪೂವಪ್ಪ ನಾಯ್ಕ ಅಡೀಲು, ಮೊದಲಾದವರು ಉಪಸ್ಥಿತರಿದ್ದರು.