ದೇರಾಜೆ :ಪುರಾತನಗೊಂಡ ಕಿಂಡಿ ಆಣೆಕಟ್ಟಿನ ಸ್ಲಾಬ್ ಮುರಿದು ದಂಪತಿಗಳಿಗೆ ಗಾಯ

0

ಮಹಿಳೆಯ ಕಾಲು ಮುರಿತ,ಪತಿ ಸಣ್ಣ ಪುಟ್ಟ ಗಾಯದಿಂದ ಪಾರು

ಅರಂತೋಡು ಗ್ರಾಮದ ದೇರಾಜೆ ಸಮೀಪ ಕಳುಬೈಲು ಎಂಬಲ್ಲಿ ಸುಮಾರು 45 ವರ್ಷಗಳ ಹಿಂದಿನ ಪುರಾತನ ಕಿಂಡಿ ಆಣೆಕಟ್ಟಿನ ಸ್ಲಾಬ್ ಮುರಿದು ಬಿದ್ದು ದಂಪತಿಗಳು ಗಾಯಗೊಂಡ ಘಟನೆ ಜನವರಿ 26ರಂದು ನಡೆದಿದೆ.

ದೇರಾಜೆ ಕಳುಬೈಲು ನಿವಾಸಿ ಚಂದ್ರಪ್ರಕಾಶ್ ಹಾಗೂ ಅವರ ಪತ್ನಿ ವೇದಾವತಿ ತಮ್ಮ ರಬ್ಬರ್ ತೋಟಕ್ಕೆ ಕೆಲಸಕ್ಕೆ ಹೋಗಿ ಮರಳಿ ಅವರ ಮನೆಗೆ ಬರಲು ಈ ಕಿಂಡಿ ಆಣೆಕಟ್ಟಿನ ಮೂಲಕ ನಡೆದು ಬರುತ್ತಿದ್ದ ಸಂದರ್ಭ ಇನ್ನೇನು ರಸ್ತೆಗೆ ಬರಬೇಕು ಅನ್ನುವಷ್ಟರಲ್ಲಿ ಆಣೆಕಟ್ಟಿನ ಸ್ಲಾಬ್ ಏಕಾಏಕಿ ಮುರಿದು ಬಿದ್ದಿದೆ.


ಈ ವೇಳೆ ಇಬ್ಬರು ಸುಮಾರು 15 ಅಡಿಗಳ ಹಾಳಕ್ಕೆ ಬಿದ್ದಿದ್ದು ಇಬ್ಬರು ಗಾಯಗೊಂಡು ಮೇಲೆ ಹೇಳಲು ಸಾಧ್ಯವಾಗದೆ ಅಲ್ಲಿಯ ಬಾಕಿಯಾದರು. ಈ ವೇಳೆ ಸೇತುವೆ ಬಿದ್ದ ಶಬ್ದ ಮತ್ತು ಈ ದಂಪತಿಗಳು ಕಿರುಚಿದ ಶಬ್ದವನ್ನು ಕೇಳಿದ ಸ್ಥಳೀಯರು ಕೂಡಲೆ ಘಟನಾ ಸ್ಥಳಕ್ಕೆ ಧಾವಿಸಿ ಅವರನ್ನು ಅಲ್ಲಿಂದ ಮೇಲೆತ್ತಿ ಸುಳ್ಯ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.
ಘಟನೆಯಿಂದ ವೇದಾವತಿಯವರ ಎಡದ ಕಾಲಿನ ಮೊಣಬಾಗ ಮುರಿತಕ್ಕೊಳಗಾಗಿದ್ದು ಚಂದ್ರಪ್ರಕಾಶರವರು ಸಣ್ಣ ಪುಟ್ಟ ಗಾಯದಿಂದ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ಮೊಣಕಾಲು ಮುರಿತಕ್ಕೊಳಗಾದ ಚಂದ್ರಾವತಿಯವರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಶಸ್ತ್ರಕ್ರಿಯೆ ಕ್ರಿಯೆ ಮಾಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕಿಂಡಿ ಆಣೆಕಟ್ಟು ಸುಮಾರು 40-45 ವರ್ಷಗಳ ಹಳೆಯದಾಗಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಉಪಯೋಗಿಸುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಬೇರೆ ಮಾರ್ಗವನ್ನು ನಿರ್ಮಿಸಿದ್ದು ಸ್ಥಳೀಯರು ಆ ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ ಚಂದ್ರಪ್ರಕಾಶ್ರವರ ಮನೆಯಿಂದ ಅವರ ತೋಟಕ್ಕೆ ಹೋಗಲು ಇದೆ ರಸ್ತೆಯನ್ನು ಅವಲಂಬಿಸಿದ್ದು ಅವರು ಪ್ರತಿ ದಿನ ತೋಟಕ್ಕೆ ಕೆಲಸಕ್ಕೆ ಈ ಮಾರ್ಗವನ್ನು ಬಳಸುತ್ತಿದ್ದಾರೆ ಎಂದು ವೇದಾವತಿಯವರು ಸುದ್ದಿಗೆ ತಿಳಿಸಿದ್ದಾರೆ.
ಆದರೆ ಘಟನೆ ಕಳೆದು 3, 4 ದಿನಗಳು ಕಳೆದರೂ ಕೂಡ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಬಂದು ನಮ್ಮನ್ನು ವಿಚಾರಿಸಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.