ಮೂರು ಫೀಟ್ ಬದಲು ಅರ್ಧ ಫೀಟ್ ಗುಂಡಿ ತೆಗೆದು ಅಳವಡಿಕೆ ಯತ್ನಕ್ಕೆ ಸ್ಥಳೀಯರ ಆಕ್ಷೇಪ
ಜಾಲ್ಸೂರು ಗ್ರಾಮದ ಬೈತಡ್ಕ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಕೆ ಮಾಡುವಾಗ ಮೂರು ಫೀಟ್ ಗುಂಡಿಯ ಬದಲು ಕೇವಲ ಅರ್ಧ ಫೀಟ್ ಮಾತ್ರ ಗುಂಡಿ ತೆಗೆದು ಅಳವಡಿಕೆ ಮಾಡುವ ಪ್ರಯತ್ನ ಮಾಡಿದ್ದು, ಇದಕ್ಕೆ ಸ್ಥಳೀಯ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಜಲಜೀವನ್ ಮಿಷನ್ ಯೋಜನೆಯ ಗ್ಯಾಲ್ವನೈಸ್ಡ್ ಐರನ್ ಮ್ಯಾನ್ಹೆಚ್.ಡಿ.ಪಿ.ಇ. ಪೈಪನ್ನು ನೆಲಮಟ್ಟದಿಂದ ಕನಿಷ್ಠ ಮೂರು ಫೀಟ್ ಗುಂಡಿ ತೆಗೆದು ಅಳವಡಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಕೇವಲ ಅರ್ಧ ಪೀಟ್ ಗುಂಡಿ ಮಾತ್ರ ತೆಗೆಯಲಾಗಿರುವುದನ್ನು ಸ್ಥಳೀಯರಾದ ಅಶ್ವಿನಿ ಬೈತಡ್ಕ ಮೊದಲಾದವರು ಪ್ರಶ್ನಿಸಿದ್ದಾರೆ. ಮೂರು ಅಡಿಯಷ್ಟು ಆಳ ಮಾಡಿದರೆ ನಮಗೆ ಅಸಲು ಆಗುವುದಿಲ್ಲ ಎಂದು ಕಾಮಗಾರಿ ನೋಡಿಕೊಳ್ಳುವವರು ಹೇಳಿದರೆನ್ನಲಾಗಿದೆ. ಈ ಬಗ್ಗೆ ಇಲಾಖೆಯ ಇಂಜಿನಿಯರ್ ಗೆ ಕೂಡ ಅಶ್ವಿನಿಯವರು ಕರೆ ಮಾಡಿ ವಿಷಯ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ಜೆ.ಸಿ.ಬಿ. ಮೂಲಕ ಕಣಿ ತೆಗೆದು ಆಳದಲ್ಲಿ ಪೈಪ್ ಹಾಕುವ ವ್ಯವಸ್ಥೆ ಮಾಡುವುದಾಗಿ ಇಂಜಿನಿಯರ್ ಹೇಳಿದರೆಂದು ಅಶ್ವಿನಿ ಬೈತಡ್ಕ ತಿಳಿಸಿದ್ದಾರೆ.
” ಇಲಾಖೆಯ ನಿಯಮದ ಪ್ರಕಾರವೇ ಮೂರು ಫೀಟ್ ಗುಂಡಿ ತೆಗೆದು ಅಳವಡಿಸಬೇಕೆಂದಿದ್ದರೂ ಅರ್ಧ ಅಡಿ, ಒಂದು ಅಡಿ ಮಾತ್ರ ಅಗೆದು ಪೈಪು ಹಾಕಿದರೆ ಮುಂದೆ ಪೈಪು ಒಡೆದು ಸಮಸ್ಯೆ ಸೃಷ್ಠಿಯಾಗಿ ಯೋಜನೆ ಫೈಲ್ಯೂರ್ ಆಗುವುದಿಲ್ಲವೇ ? ಇಂಜಿನಿಯರ್ ಗಳು ಸರಿಯಾಗಿ ನೋಡಿ ಸಮರ್ಪಕ ಕೆಲಸ ಮಾಡಿಸಬೇಕಲ್ಲವೇ? ಪ್ರತಿ ಬಾರಿಯೂ ಸ್ಥಳೀಯರು ಪ್ರಶ್ನಿಸಿದರೆ ಮಾತ್ರ ಕೆಲಸ ಸರಿ ಮಾಡಿಸುವುದೇ ?” ಎಂದು ಅಶ್ವಿನ್ ಬೈತಡ್ಕ ಅಭಿಪ್ರಾಯ ಪಟ್ಟಿದ್ದಾರೆ.