ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ದುರ್ಗಾಪೂಜಾ ಕಾರ್ಯಕ್ರಮ: ನಿವೃತ್ತ ಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆಯವರಿಗೆ ಸನ್ಮಾನ

0

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜಾ ಕಾರ್ಯಕ್ರಮವು ಮಾ. ೧೭ರಂದು ಜರುಗಿತು. ಪ್ರಾತಃಕಾಲ ಗಣಪತಿ ಹವನ, ಸಂಜೆ ಶ್ರೀ ಕ್ಷೇತ್ರದ ಧರ್ಮದರ್ಶಿ ಹಾಗೂ ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ ಅಯ್ಯಪ್ಪ ವೃತಧಾರಿಗಳಿಂದ ದೀಪಾರಾಧನೆ ನಡೆಯಿತು. ನಂತರ ‘ಶ್ರೀ ಮಹಮ್ಮಾಯಿ ಭಕ್ತ ಮಂಡಳಿ’ ಅಡ್ಪಂಗಾಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸೇವಾ ಬಾಬ್ತು ದುರ್ಗಾಪೂಜೆ ನಡೆಯಿತು. ದುರ್ಗಾಪೂಜೆಯನ್ನು ಹೊನ್ನಪ್ಪ ಮಾಸ್ತರ್ ಅಡ್ತಲೆ ಇವರ ಪ್ರಾರ್ಥನಾ ಸೇವೆಯಾಗಿ ನೆರವೇರಿಸಲಾಯಿತು.

ನಂತರ ಶ್ರೀ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆಯು ನಡೆಯಿತು. ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಡುವಂತಹ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು, ಜನಮನ್ನಣೆ ಗಳಿಸಿಕೊಂಡಿರುವ ಮಿತ್ತೂರು-ಮರ್ಕಂಜ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿರುವ ಹೊನ್ನಪ್ಪ ಮಾಸ್ತರ್ ಅಡ್ತಲೆಯವರನ್ನು ಕ್ಷೇತ್ರದ ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯರು ಫಲ, ಪುಷ್ಪ, ಸನ್ಮಾನ ಪತ್ರದೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಭಾರ ಶಿಕ್ಷಣಾಧಿಕಾರಿ ಹಾಗೂ ಅರೆಭಾಷೆ ಅಕಾಡಮಿಯ ನೂತನ ಸದಸ್ಯ ಚಂದ್ರಶೇಖರ ಪೇರಾಲು, ಮಾಜಿ ಶಾಸಕ ಶ್ರೀ ಕೆ. ಕುಶಲ ಸೇರಿದಂತೆ ಊರಿನ ಹಾಗೂ ಪರ ಊರಿನ ನೂರಾರು ಭಕ್ತಾದಿಗಳು ಹಾಜರಿದ್ದರು.

ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅನ್ನದಾನ ಸೇವೆಯನ್ನು ಹೊನ್ನಪ್ಪ ಮಾಸ್ತರ್ ಅಡ್ತಲೆಯವರು ಒದಗಿಸಿಕೊಟ್ಟರು.