ಕೊಡಗು ಜಿಲ್ಲೆಯ ಕರಿಕೆಯಲ್ಲಿ ನಡೆದ ಅಂತರ್ಜಿಲ್ಲಾ ಗಡಿ ಪ್ರದೇಶದ ಚುನಾವಣಾ ಕರ್ತವ್ಯದ ಸಭೆಗೆ ಸುಳ್ಯ ಪೊಲೀಸ್ ಅಧಿಕಾರಿಗಳು ಭಾಗಿ

0

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂತರ್ಜಿಲ್ಲಾ ಗಡಿ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯದ ಕುರಿತು ಕೊಡಗು ಜಿಲ್ಲೆಯ ಕರಿಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆಗೆ ಸುಳ್ಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಈ ಸಭೆಯ ನೇತೃತ್ವವನ್ನು ಮಡಿಕೇರಿ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ವಹಿಸಿದ್ದರು. ಸುಳ್ಯ,ರಾಜಪುರಂ, ಭಾಗಮಂಡಲ,ನಾಪೋಕ್ಲು, ಮಡಿಕೇರಿ ಪೋಲಿಸ್ ಠಾಣೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ತಪಾಷಣೆ, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಘಾ ವಹಿಸುವುದು, ಅಲ್ಲದೆ ಅಂತರ್ಜಿಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹ, ಚಕ್ ಪೋಸ್ಟ್ ಗಳಲ್ಲಿ ತನಿಖೆಯ ವಿಧಾನ, ಬೇರೆ ಬೇರೆ ಪೊಲೀಸ್ ಠಾಣೆಗಳ ಅಧಿಕಾರಿಗಳಿಂದ ಕರ್ತವ್ಯಕ್ಕೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಪಡೆದುಕೊಳ್ಳುವುದು, ದೂರವಾಣಿ ಸಂಪರ್ಕದಲ್ಲಿ ಇರುವುದು ಮುಂತಾದ ವಿಷಯಗಳಲ್ಲಿ ಹಿರಿಯ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.

ಸುಳ್ಯ ವೃತ್ತದಿಂದ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ್, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಈರಯ್ಯ ದೂಂತೂರು, ಸರಸ್ವತಿ ಈ ಸಭೆಯಲ್ಲಿ ಭಾಗವಹಿಸಿದ್ದರು.